ಹುಬ್ಬಳ್ಳಿ : ಸದ್ಯಕ್ಕೆ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ. ಬಿಜೆಪಿಗೆ ಸೇರುವ ಬಗ್ಗೆ ನಾನು ಎಲ್ಲೂ ಮಾತನಾಡಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು, ಶಿಕ್ಷಕರ ಕ್ಷೇತ್ರಕ್ಕೆ ವಿವಿಧ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿವೆ.
ಬರುವ ಮೇ ತಿಂಗಳಲ್ಲಿ ಚುನಾವಣೆ ಇದೆ. ನನ್ನ ಚುನಾವಣೆ ವಿಚಾರದಲ್ಲಿ ಜಾತಿಯ ಪ್ರಶ್ನೆಯೇ ಬರಲ್ಲ. ನನಗೆ ಶಿಕ್ಷಕರ ಬೆಂಬಲವಿದೆ. ನಾನು ಯಾವ ಪಕ್ಷಕ್ಕೂ ಹೋಗಬೇಕೆಂಬುದಿಲ್ಲ. ಕೆಲವು ಸ್ನೇಹಿತರು ಬಿಜೆಪಿಗೆ ಸೇರುವಂತೆ ಆಹ್ವಾನ ನೀಡಿದ್ದರು.
ಮತ್ತೆ ಕೆಲವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಸಲಹೆ ನೀಡಿದ್ದಾರೆ. ಇನ್ನೂ ಸಾಕಷ್ಟು ಸಮಯಾವಕಾಶವಿದೆ. ಬಜೆಟ್ ಅಧಿವೇಶನದ ನಂತರ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.
ಮತಾಂತರ ನಿಷೇಧ ಕಾಯ್ದೆಯನ್ನು ಪರಿಷತ್ನ ಬಜೆಟ್ ಅಧಿವೇಶನದಲ್ಲಿ ಮಂಡನೆಯ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಯಾವ ಮಸೂದೆಗಳು ಮಂಡನೆಯಾಗುವುದು ಅನ್ನೋದರ ಬಗ್ಗೆ ಮಾಹಿತಿಯಿಲ್ಲ. ಪರಿಷತ್ನಲ್ಲಿ ಮಂಡನೆ ಆದ್ರೂ ನೆಕ್ ಟು ನೆಕ್ ಫೈಟ್ ಇದೆ ಎಂದು ಇದೇ ವೇಳೆ ಪ್ರತಿಕ್ರಿಯಿಸಿದರು.