ಹುಬ್ಬಳ್ಳಿ : ಮಾಜಿ ರೌಡಿಶೀಟರ್ ಹಾಗೂ ಆರ್ಟಿಐ ಕಾರ್ಯಕರ್ತ ರಮೇಶ ಭಾಂಡಗೆ ಕೊಲೆಗೆ 25 ಲಕ್ಷ ರೂ. ಸುಪಾರಿ ಕೊಟ್ಟಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಸದರಸೋಪಾ ನಿವಾಸಿ ರಫೀಕ ಜವಾರಿ, ವಸೀಮ ಬಂಕಾಪುರ, ಶಿವಾಜಿ ಮಿಶಾಳ, ಫಯಾಜ್ ಪಲ್ಲಾನ, ತೌಶೀಫ್ ನರಗುಂದ ಬಂಧಿತರು. ಇವರಿಂದ 6.10 ಲಕ್ಷ ರೂ. ನಗದು, ಎರಡು ಬೈಕ್ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ : ಸುಲಿಗೆ ಪ್ರಕರಣದಲ್ಲಿ ಭಾಗಿ ಆರೋಪ: ಹೆಡ್ ಕಾನ್ಸ್ಟೇಬಲ್ ಸಸ್ಪೆಂಡ್
ಗಬ್ಬೂರು ಗ್ರಾಮದ ಅನಧಿಕೃತ ಫ್ಯಾಕ್ಟರಿ ಹಾಗೂ ಮನೆಗಳನ್ನು ತೆರವುಗೊಳಿಸುವಂತೆ ಹಾಗೂ ವಿದ್ಯುತ್ ಖಡಿತಗೊಳಿಸುವಂತೆ ಕೆಇಬಿಯವರಿಗೆ ಪತ್ರ ಬರೆದಿದ್ದ ರಮೇಶ, ವಿದ್ಯುತ್ ಕಡಿತಗೊಳಿಸುವಂತೆ ಮಾಡಿದ್ದ. ಇದರಿಂದ ಆಕ್ರೋಶಗೊಂಡ ರಫೀಕ್ ಜವಾರಿ ಹಾಗೂ ಇತರರು ಸೇರಿ ರಮೇಶನ ಹತ್ಯೆಗೆ 25 ಲಕ್ಷ ರೂ.ಗೆ ಇಜಾಜಾ ಅಹ್ಮದನಿಗೆ ಸುಪಾರಿ ನೀಡಿದ್ದರು.
ನ.25ರಂದು ಬಾಬಾಸಾನಗಲ್ಲಿಯಲ್ಲಿ ಇಜಾಜಾ ರಮೇಶನಿಗೆ ಚಾಕುವಿನಿಂದ ಇರಿದು ಕೊಲೆಗೈದಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಶಹರ ಠಾಣೆ ಇನ್ಸ್‌ಪೆಕ್ಟರ್ ಎಂ ಎಸ್ ಪಾಟೀಲ ಹಾಗೂ ತಂಡ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.