ಹುಬ್ಬಳ್ಳಿ : ಕೊರೊನಾ ಸೋಂಕಿನ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿದ್ದರೂ, ಹಲವು ಕಡೆ ಜನರು ಸೋಂಕಿನ ಭಯ ಬಿಟ್ಟು ವೈಯಕ್ತಿಕ(ಸಾಮಾಜಿಕ) ಅಂತರ ನಿಯಮ ಪಾಲನೆ ಮಾಡುವುದನ್ನ ಮರೆಯುತ್ತಿದ್ದಾರೆ. ಹೀಗಾಗಿ ಹುಬ್ಬಳ್ಳಿಯ ಟೆಕ್ಕಿಯೊಬ್ಬರು ಸಾಮಾಜಿಕ ಅಂತರ ಕಾಪಾಡಲು ಹೊಸ ತಂತ್ರ ಮಾಡಿದ್ದಾರೆ.
ಜನರು ವ್ಯಕ್ತಿಗತ ಅಂತರ ಪಾಲಿಸುವಂತೆ ಎಷ್ಟೇ ಪ್ರಯತ್ನಪಟ್ಟರೂ ಸಾರ್ವಜನಿಕ ಸ್ಥಳಗಳಲ್ಲಿ ಕೆಲವರು ಮಾಡುವ ತಪ್ಪಿನಿಂದ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಇದಕ್ಕಾಗಿ ಹುಬ್ಬಳ್ಳಿಯ ಟೆಕ್ಕಿ ಶ್ರೀರಾಮ ವಿನೂತನ ಪ್ರಯೋಗ ಮಾಡಿದ್ದು, ಕಡಿಮೆ ವೆಚ್ಚದಲ್ಲಿ ಡಿಸ್ಟೋಸೀಟ್ ಅನ್ನೋ ಉಪಕರಣದ ಮೂಲಕ ವೈಯಕ್ತಿಕ ಅಂತರ ಕಾಪಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಹುಬ್ಬಳ್ಳಿಯಲ್ಲಿ ಮೈಟೆಕ್ ಡಿಸೈನ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ನಡೆಸುತ್ತಿರುವ ಶ್ರೀರಾಮ, ಎಂಟೆಕ್‍ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿದ್ದಾರೆ. ಇತ್ತೀಚೆಗೆ ಇವರು ಬ್ಯಾಂಕ್‍ಗೆ ತೆರಳಿದ ವೇಳೆ ವೈಯಕ್ತಿಕ ಅಂತರ ಇಲ್ಲದೇ ಜನರು ಮುಗಿಬಿದ್ದಿದ್ದನ್ನು ಕಂಡು ಡಿಸ್ಟೋಸೀಟ್ ಯಂತ್ರ ಕಂಡು ಹಿಡಿದಿದ್ದಾರೆ.
ಮೈಕ್ರೋ ಕಂಟ್ರೋಲರ್ ಹಾಗೂ ಸ್ಥಳೀಯವಾಗಿ ಸಿಗುವ ವಿದ್ಯುತ್ ಕಚ್ಚಾ ಸಾಮಗ್ರಿಗಳನ್ನು ಬಳಸಿಕೊಂಡು ಕಡಿಮೆ ವೆಚ್ಚದಲ್ಲಿ, ಅಂದ್ರೆ ಕೇವಲ 250 ರೂಪಾಯಿ ವೆಚ್ಚದಲ್ಲಿ ಈ ಡಿಸ್ಟೋಸೀಟ್ ಉಪಕರಣ ಕಂಡುಹಿಡಿದಿದ್ದಾರೆ. ಈ ಡಿಸ್ಟೋಸೀಟ್ ಅಳವಡಿಸಿದರೆ ಒಂದು ಮೀಟರ್ ಅಕ್ಕಪಕ್ಕದಲ್ಲಿ ಯಾರಾದರು ಕುಳಿತರೆ ರೆಡ್ ಬಜರ್ ಬಾರಿಸುತ್ತದೆ.
ಡಿಸ್ಟೋಸೀಟ್ ಉಪಕರಣವನ್ನು ವಿಶೇಷವಾಗಿ ಬ್ಯಾಂಕ್, ಶಾಲಾ - ಕಾಲೇಜು, ಚಿತ್ರಮಂದಿರ, ಮೆಟ್ರೋ ಹಾಗೂ ಆಸ್ಪತ್ರೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಬಳಸಬಹುದಾಗಿದೆ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಡಿಸ್ಟೋಸೀಟ್ ಉಪಕರಣ ಸಾಕಷ್ಟು ಉಪಕಾರಿಯಾಗಿದೆ. ಅಲ್ಲದೇ ಕಡಿಮೆ ವೆಚ್ಚದಲ್ಲಿ ಈ ಡಿಸ್ಟೋಸೀಟ್ ಮೂಲಕ ಸಾಮಾಜಿಕ ಅಂತರ ಕಾಪಾಡಿಕೊಂಡು ಕೊರೊನಾ ವೈರಸ್ ಹರಡುವುದನ್ನ ತಡೆಗಟ್ಟಬಹುದಾಗಿದೆ.
ಶ್ರೀರಾಮ ಅವರ ಕುಟುಂಬ ಸದಸ್ಯರೆಲ್ಲರೂ ಇಂಜಿನಿಯರ್ಗಳಾಗಿದ್ದು ಸಾಮಾಜಿಕ ಕಾಳಜಿಯಿಂದ ಉಪಕರಣ ಶೋಧಿಸಿದ್ದಾರೆ. ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಇದನ್ನು ಬಳಸಿಕೊಳ್ಳುವ ಮೂಲಕ ವ್ಯಕ್ತಿಗತ (ಸಾಮಾಜಿಕ) ಅಂತರ ಕಾಯ್ದುಕೊಳ್ಳಬಹುದಾಗಿದೆ.