ಹುಬ್ಬಳ್ಳಿ : ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ಆವರಣದಲ್ಲಿ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳನ್ನು ಇಲ್ಲಿನ ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ಧಾರ್ಮಿಕ ಭಾವನೆಗೆ ಧಕ್ಕೆಯನ್ನು ಉಂಟು ಮಾಡುವ ರೀತಿಯ ಪೋಸ್ಟ್‌ಗಳನ್ನು ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಿಡಿಗೇಡಿಗಳು ನಿನ್ನೆ ಕಲ್ಲು ತೂರಾಟ ನಡೆಸಿದ್ದರು. ಈಗಾಗಲೇ ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ ಸುಮಾರು 40ಕ್ಕೂ ಹೆಚ್ಚು ಕಿಡಿಗೇಡಿಗಳನ್ನ ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.
ಈಗಾಗಲೇ ಧಾರವಾಡ ಜಿಲ್ಲೆಯಾದ್ಯಂತೆ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಆದೇಶ ಹೊರಡಿಸಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಲ್ಲೆಡೆಯೂ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಲ್ಲದೇ ಹಳೆ ಹುಬ್ಬಳ್ಳಿಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಇದಲ್ಲದೆ ನಿನ್ನೆ ರಾತ್ರಿ ಕೆಲ ಕಿಡಿಗೇಡಿಗಳು ಸಂಜೀವಿನಿ ಆಸ್ಪತ್ರೆಗೂ ನುಗ್ಗಿ ದಾಂಧಲೆ ನಡೆಸಿದ್ದಾರೆ. ಆಸ್ಪತ್ರೆಯ ಕಿಟಿಕಿ ಗಾಜುಗಳನ್ನು ಪುಡಿ ಮಾಡಿದ್ದಾರೆ. ಆಂಜನೇಯ ದೇವಾಲಯದಲ್ಲಿಯೂ ದಾಂಧಲೆ ನಡೆಸಿ ಪೂಜಾ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳು ದಾಖಲಾಗಿವೆ.
ಸದ್ಯ 40ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಕಲ್ಲು ತೂರಾಟದಲ್ಲಿ 12 ಜನ ಪೊಲೀಸರು ಗಾಯಗೊಂಡಿದ್ದು, 7 ವಾಹನಗಳು ಜಖಂಗೊಂಡಿವೆ. ಇನ್ನು ಸಾರ್ವಜನಿಕರಿಗೆ ಯಾವುದೇ ಹಾನಿಯಾಗಿದ್ದರೆ ದೂರು ದಾಖಲಿಸುವಂತೆ ಆಯುಕ್ತರು ಸೂಚಿಸಿದ್ದಾರೆ. ಸದ್ಯ ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಓದಿ : ಆಕ್ಷೇಪಾರ್ಹ ಪೋಸ್ಟ್ನಿಂದ ಹುಬ್ಬಳ್ಳಿ ಪ್ರಕ್ಷುಬ್ಧ.. ಪೊಲೀಸ್ ಠಾಣೆ ಮುಂದೆ ಕಲ್ಲು ತೂರಾಟ, ವಾಹನಗಳು ಜಖಂ