ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದ್ದ ಮಗು ಕಳ್ಳತನ ಪ್ರಕರಣದಲ್ಲಿ ತಾಯಿಯೇ ದೋಷಿ ಎಂದು ಸಾಬೀತಾಗಿದೆ. ಹೆತ್ತ ಮಗುವನ್ನು ಎಸೆದ ಪಾಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಘಟನೆಯ ವಿವರ: ಜೂನ್ 13ರಂದು ಮಧ್ಯಾಹ್ನ ಕಿಮ್ಸ್ ಆವರಣದಲ್ಲಿ ಕೈಯಲ್ಲಿದ್ದ ಮಗು ಕಳ್ಳತನವಾಗಿದೆ ಎಂದು ತಾಯಿ ಸಲ್ಮಾ ದೂರು ಸಲ್ಲಿಸಿದ್ದಳು. ಈ ದೂರಿನ ಅನ್ವಯ ಪೊಲೀಸರು ಕಿಮ್ಸ್‌ನ 300ಕ್ಕೂ ಅಧಿಕ ಸಿಸಿಟಿವಿಗಳನ್ನು ಪರಿಶೀಲಿಸಿದ್ದರು. ಕೊನೆಗೆ, ತಾಯಿಯೇ ಮಗು ಕಳ್ಳತನ ನಾಟಕವಾಡಿದ್ದಾಳೆ ಎಂಬುದನ್ನು ಪತ್ತೆ ಹಚ್ಚಿದ್ದರು.
ಬಳಿಕ ಸಲ್ಮಾಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮಗುವಿನ ಮೆದುಳು ಬೆಳವಣಿಗೆಯಾಗದ ಕಾರಣ ಬಾತ್ ರೂಂ ಕಿಟಕಿಯ ಮೂಲಕ ಹೊರಗೆ ಎಸೆದಿದ್ದಾಗಿ ಒಪ್ಪಿಕೊಂಡಿದ್ದಾಳೆ. ಸದ್ಯ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಕೂಲಂಕಷ ವಿಚಾರಣೆಯ ಬಳಿಕ ಆರೋಪಿ ಸಲ್ಮಾಳನ್ನು ಬಂಧಿಸಿದ ವಿದ್ಯಾನಗರ ಪೊಲೀಸರು, ಹುಬ್ಬಳ್ಳಿ 1ನೇ ಅಧಿಕ ದಿವಾಣಿ ಹಾಗೂ ಜೆಎಂಎಫ್ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಇದನ್ನೂ ಓದಿ: ಹುಬ್ಬಳ್ಳಿ ಮಗು ಕಳ್ಳತನ ಪ್ರಕರಣಕ್ಕೆ ರೋಚಕ ಟ್ವಿಸ್ಟ್; ಕರುಳು ಬಳ್ಳಿಯನ್ನ ಕಿಟಿಕಿಯಿಂದ ಎಸೆದದ್ದು ಹೆತ್ತಮ್ಮನೇ ಅಂತೆ!