ಹುಬ್ಬಳ್ಳಿ: ಇಷ್ಟು ದಿನ ಸಾರ್ವಜನಿಕರಲ್ಲಿ ಹತ್ತು ರೂಪಾಯಿ ಹಾಗೂ ಇಪ್ಪತ್ತು ರೂಪಾಯಿ ನಾಣ್ಯಗಳ ಬಗ್ಗೆ ಒಂದು ಆತಂಕ ಇತ್ತು. ಆದರೆ ಹುಬ್ಬಳ್ಳಿಯ ಹೋಟೆಲ್ ವರ್ತಕರು ಈ ಆತಂಕಕ್ಕೆ ಬ್ರೇಕ್ ಹಾಕಿದ್ದು, ಈಗ 10 ಮತ್ತು 20 ರೂಪಾಯಿ ಮುಖ ಬೆಲೆಯ ನಾಣ್ಯಗಳನ್ನು ಯಾವುದೇ ಆಕ್ಷೇಪಣೆ ಇಲ್ಲದೇ ಪಡೆಯಲು ಒಪ್ಪಿಗೆ ಸೂಚಿಸಿದ್ದಾರೆ.
ಕೆಲವು ತಿಂಗಳು ಹಿಂದೆಯಷ್ಟೆ ಚಾಲ್ತಿಯಲ್ಲಿದ್ದ ಹತ್ತು ರೂಪಾಯಿ ನಾಣ್ಯ ಇತ್ತೀಚಿನ ದಿನಗಳಲ್ಲಿ ಚಲಾವಣೆಯೇ ಕಾಣುತ್ತಿರಲಿಲ್ಲ. ಅಲ್ಲದೇ ಜನರು ಕೂಡ ಹತ್ತು ರೂಪಾಯಿ ನಾಣ್ಯಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಹುಬ್ಬಳ್ಳಿಯ ಹೋಟೆಲ್ ಉದ್ಯಮಿಗಳು ಈಗ ಹತ್ತು, ಇಪ್ಪತ್ತು ರೂಪಾಯಿ ಮುಖ ಬೆಲೆಯ ನಾಣ್ಯಗಳನ್ನು ಪಡೆಯುವ ಹಾಗೂ ಕೊಡುವ ಮೂಲಕ ಮತ್ತೊಮ್ಮೆ ನಾಣ್ಯ ಚಲಾವಣೆಗೆ ಮುನ್ನುಡಿ ಬರೆಯುತ್ತಿದ್ದಾರೆ.
ಓದಿ: ಸತತ ಎಂಟು ವರ್ಷ ನಾಣ್ಯ ಸಂಗ್ರಹ.. ತನ್ನಿಷ್ಟದಂತೆ ಚಿಲ್ಲರೇ ದುಡ್ಡಲ್ಲೇ ಸ್ಕೂಟರ್ ಖರೀದಿಸಿದ ಭೂಪ!
ಹುಬ್ಬಳ್ಳಿಯ ಬಹುತೇಕ ಹೊಟೇಲ್ಗಳಲ್ಲಿ ಕಳೆದ ಎರಡು ದಿನಗಳಿಂದ ಸೂಚನಾ ಫಲಕಗಳ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದ್ದಾರೆ. 10 ಮತ್ತು 20 ರೂಪಾಯಿ ನಾಣ್ಯಗಳನ್ನು ಚಲಾವಣೆಗೆ ಸ್ವೀಕರಿಸಲಾಗುವುದು ಎಂದು ಸಾರ್ವಜನಿಕರಿಗೆ ಮಾಹಿತಿ ರವಾನೆ ಮಾಡುವ ಮೂಲಕ ಸಾರ್ವಜನಿಕರ ಆತಂಕವನ್ನು ದೂರ ಮಾಡಿದ್ದಾರೆ. ಈಗಾಗಲೇ ಸ್ಟೇಷನ್ ರಸ್ತೆಯಲ್ಲಿರುವ ಹಾಗೂ ನೀಲಿಜನ್ ರಸ್ತೆಯಲ್ಲಿರುವ ಬಹುತೇಕ ಹೋಟೆಲ್ಗಳಲ್ಲಿ ಹತ್ತು, ಇಪ್ಪತ್ತು ರೂಪಾಯಿ ಮುಖ ಬೆಲೆಯ ನಾಣ್ಯಗಳ ಚಲಾವಣೆಗೆ ನಾಂದಿ ಹಾಡಿದ್ದಾರೆ.