ಹುಬ್ಬಳ್ಳಿ (ಧಾರವಾಡ) : ಹಿಜಾಬ್ ವಿವಾದದ ನಡುವೆಯೂ ಕಾಲೇಜುಗಳು ಪುನಾರಂಭವಾಗಿದೆ. ಸಮವಸ್ತ್ರ ನೀತಿ ಪಾಲನೆ ಕಡ್ಡಾಯ ಮಾಡಲಾಗಿದೆ. ಆದರೂ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ಬಂದಿದ್ದು, ಅಂತಹ ವಿದ್ಯಾರ್ಥಿಗಳನ್ನು ಹೊರಗೆ ನಿಲ್ಲಿಸಿದ ಘಟನೆ ಇಲ್ಲಿನ ಜೆಸಿನಗರದ ಮಹಿಳಾ ಕಾಲೇಜಿನ ಆವರಣದಲ್ಲಿ ನಡೆದಿದೆ.
ಹಿಜಾಬ್ ಹಾಕಿಕೊಂಡು ಬಂದ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಹೊರಗೆ ನಿಲ್ಲಿಸಿ, ಹಿಜಾಬ್ ತೆಗೆದು ಒಳಗೆ ಬನ್ನಿ, ಇಲ್ಲದಿದ್ದರೆ ಕಾಲೇಜು ಪ್ರವೇಶಕ್ಕೆ ಅನುಮತಿ ಇಲ್ಲ ಎಂದು ಹೇಳಿದ್ದನ್ನು ಖಂಡಿಸಿ ವಿದ್ಯಾರ್ಥಿನಿಯರು ಕಾಲೇಜು ಎದುರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ವಿ ವಾಂಟ್ ಜಸ್ಟೀಸ್ ಎಂದು ವಿದ್ಯಾರ್ಥಿಗಳು ಘೋಷಣೆ ಕೂಗಿ, ಕಾಲೇಜು ಎದುರು ಪ್ರತಿಭಟಿಸಿದರು. ವಿದ್ಯಾರ್ಥಿನಿಯರು ನಾವು ಹಿಜಾಬ್ ತೆಗೆಯೋದಿಲ್ಲ, ನಾವು ಹಿಜಾಬ್ ಹಾಕಿಕೊಂಡೇ ಕಾಲೇಜಿಗೆ ಬರುತ್ತೇವೆ ಎಂದು ಪಟ್ಟು ಹಿಡಿದರು.
ಇದನ್ನೂ ಓದಿ: ಮಲ್ಲೇಶ್ವರ ಪಿಯು ಕಾಲೇಜು : ಹಿಜಾಬ್-ಬುರ್ಕಾ ಧರಿಸಿಯೇ ಹೋಗುವಂತೆ ಕಾಂಗ್ರೆಸಿಗರು ಒತ್ತಾಯಿಸಿದ ಆರೋಪ
ನಂತರ ಕಾಲೇಜು ಆಡಳಿತ ಮಂಡಳಿಯು ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದ್ದು, ಯಾವುದೇ ಪ್ರಯೋಜನವಾಗಲಿಲ್ಲ. ಹಾಗಾಗಿ, ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಚರ್ಚೆ ಮಾಡಿ ಕಾಲೇಜಿಗೆ ರಜಾ ಘೋಷಣೆ ಮಾಡಿದರು. ಪ್ರತಿಭಟನಾ ಸಂದರ್ಭದಲ್ಲಿ ಕಾಲೇಜು ಎದುರು ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.