ಹುಬ್ಬಳ್ಳಿ : ಹಿಜಾಬ್ ಕುರಿತು ಹೈಕೋರ್ಟ್ ತೀರ್ಪು ನೀಡಿದ್ದು, ಹಲವರಿಂದ ಹೈಕೋರ್ಟ್ ತೀರ್ಪಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹಿಜಾಬ್ ತೀರ್ಪಿನ ಕುರಿತು ಹಲವು ಮುಸ್ಲಿಂ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ಕುರಿತಾದ ಹೈಕೋರ್ಟ್ ತೀರ್ಪನ್ನು ನಾವು ಒಪ್ಪಲು ಸಾಧ್ಯವಿಲ್ಲ. ನಾವು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ ತೀರ್ಪಿಗಾಗಿ ಕಾಯುವುದಾಗಿ ಅಂಜುಮನ್ ಸಂಸ್ಥೆ ಮುಖಂಡ ಅಲ್ತಾಫ್ ಹಳ್ಳೂರ ಹೇಳಿದ್ದಾರೆ.
ಹಿಜಾಬ್ ಕುರಿತು ಹೈಕೋರ್ಟ್ ತೀರ್ಪು ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಹೈಕೋರ್ಟ್‌ನಲ್ಲಿ ನಮ್ಮ ಪರವಾಗಿ ತೀರ್ಪು ಬರುತ್ತೆ ಅನ್ನೋ ವಿಶ್ವಾಸವಿತ್ತು. ಹಿರಿಯ ನ್ಯಾಯವಾದಿಗಳು ಮತ್ತಿತರರು ಹಿಜಾಬ್ ಪರವಾಗಿಯೇ ತೀರ್ಪು ಬರುವುದಾಗಿ ಹೇಳಿದ್ದರು.
ಆದರೆ, ಹಿಜಾಬ್ ವಿರುದ್ಧ ಹೈಕೋರ್ಟ್ ತೀರ್ಪು ಬಂದಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ. ಈ ಬಗ್ಗೆ ನಾವು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇವೆ. ಅಲ್ಲಿಯವರೆಗೂ ಹಿಜಾಬ್ ಧರಿಸಿಕೊಂಡು ಕ್ಲಾಸ್‌ಗೆ ಹಾಜರಾಗಲು ಅವಕಾಶ ನೀಡಬೇಕು. ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ನೆರವು ನೀಡಬೇಕು ಎಂದು ಹೇಳಿದ್ದಾರೆ.
ಹೈಕೋರ್ಟ್‌ನ ತೀರ್ಪನ್ನು ಪಾಲನೆ ಮಾಡಬೇಕು. ಆದರೆ, ತೀರ್ಪು ನಮ್ಮ ವಿರುದ್ಧ ಬಂದಿರುವುದರಿಂದ ಸುಪ್ರೀಂಕೋರ್ಟ್ ತೀರ್ಪಿನ ಮೇಲೆ ಹೆಚ್ಚು ವಿಶ್ವಾಸ ಇಟ್ಟಿದ್ದೇವೆ. ಸುಪ್ರೀಂಕೋರ್ಟ್‌ನಲ್ಲಿ ನಮಗೆ ನ್ಯಾಯ ಸಿಗುತ್ತೆ ಅನ್ನೋ ವಿಶ್ವಾಸವಿದೆ ಎಂದು ಇದೇ ವೇಳೆ ಹೇಳಿದ್ದಾರೆ.
ಇದೇ ವೇಳೆ ಮುಸ್ಲಿಂ ಮುಖಂಡ ಅಸ್ಫಾಕ್ ಕುಮಟಾಕರ್, ಶಾಹೀನ್ ಕುರಹಟ್ಟಿ ಮಾತನಾಡಿ, ಈ ತೀರ್ಪು ಮುಸ್ಲಿಂ ಧರ್ಮದ ವಿರುದ್ದವಾಗಿದೆ. ಹಿಜಾಬ್ ನಮ್ಮ ಹಕ್ಕು, ಈ ತೀರ್ಪನ್ನು ನಾವು ಸ್ವಾಗತಿಸಲು ಸಾಧ್ಯವಿಲ್ಲ. ಇದನ್ನು ಪ್ರಶ್ನಿಸಿ ನಾವು ಸುಪ್ರೀಂಕೋರ್ಟ್ ಮೆಟ್ಟಿಲೇರಲಿದ್ದೇವೆ ಎಂದು ಹೇಳಿದ್ದಾರೆ.
ಓದಿ: ಲಿಖಿತ ಪರೀಕ್ಷೆ ಇಲ್ಲದೇ ರೈಲ್ವೆಯಲ್ಲಿ ಉದ್ಯೋಗ ಕೊಡಿಸುವುದಾಗಿ 100 ಜನರಿಗೆ ಮೋಸ: ಇಬ್ಬರು ಅರೆಸ್ಟ್