ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿವಪುರ ತಾಂಡಾದಲ್ಲಿ ಬಡ ಕುಟುಂಬವೊಂದು ಮೃತ ಮಗನ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದೆ. ಹನುಮಂತಪ್ಪ ಮತ್ತು ಲಕ್ಕವ ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ದಂಪತಿ.
ಈ ದಂಪತಿ ಪುತ್ರ ಪ್ರಕಾಶ (42) ಆಗಸ್ಟ್ 13, 2022 ರಂದು ಬೈಕ್ ಅಪಘಾತದಲ್ಲಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಗಂಭೀರವಾಗಿ ಗಾಯವಾಗಿದ್ದರಿಂದ ಪ್ರಕಾಶ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಹೀಗಾಗಿ ನಿನ್ನೆ ಬೆಳಗ್ಗೆ ಪ್ರಕಾಶ ಮೆದುಳು ನಿಷ್ಕ್ರಿಯಗೊಂಡಿತ್ತು. ಇದನ್ನರಿತ ಮೃತನ ತಂದೆ - ತಾಯಿ ಮಗನ ಅಂಗಾಂಗ ದಾನ ಮಾಡುವ ಮೂಲಕ ಬೇರೊಂದು ಜೀವಕ್ಕೆ ಉಪಕಾರಿಯಾಗುವ ಜೊತೆಗೆ ಇತರರಿಗೆ ಮಾದರಿಯಾಗಿದ್ದಾರೆ.
ಇದನ್ನೂ ಓದಿ: ಇಂದು ವಿಶ್ವ ಅಂಗಾಂಗ ದಾನ ದಿನ: ಅಂಗಾಂಗ ದಾನಕ್ಕೆ ಸಿಎಂ ಬೊಮ್ಮಾಯಿ, ಸಚಿವ ಸುಧಾಕರ್ ಹೆಸರು ನೋಂದಣಿ
ಮಗನ ಅಂಗಾಂಗ ದಾನ: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಮಾಡಲಾಯಿತು. ಝೀರೋ ಟ್ರಾಫಿಕ್ನಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ ವಿಮಾನ ನಿಲ್ದಾಣದವರೆಗೆ ಮೃತನ ಲಿವರ್ ಸೇರಿದಂತೆ ಇತರ ಅಂಗಾಂಗಳನ್ನ ವಿಮಾನದ ಮೂಲಕ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಯಿತು.
ಮೃತನ ತಂದೆ ತಾಯಿಯು ಪ್ರಕಾಶನ ಪತ್ನಿಯ ಒಪ್ಪಿಗೆ ಮೇರೆಗೆ ಅಂಗಾಂಗ ದಾನ ಮಾಡಿದ್ದಾರೆ. ನಂತರ ಪ್ರಕಾಶ ಮೃತದೇಹವನ್ನ ಶಿವಪುರ ತಾಂಡಾಕ್ಕೆ ತಂದು ಅಂತ್ಯಕ್ರಿಯೆ ನೆರವೇರಿಸಲಾಯಿತು. ಪ್ರಕಾಶ್ ಮೃತದೇಹ ಮನೆಗೆ ಬರ್ತಿದ್ದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತದೇಹಕ್ಕೆ ಪೂಜೆ ಸಲ್ಲಿಸಿದ ನಂತರ ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗಲಾಯಿತು. ಎದೆಯಲ್ಲಿ ಮಗನನ್ನು ಕಳೆದುಕೊಂಡು ಸಾಕಷ್ಟು ನೋವಿದ್ರೂ ತಾಯಿಯಲ್ಲಿ ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದ ಭಾವವಿತ್ತು.
ಇದನ್ನೂ ಓದಿ:ಮಿದುಳು ನಿಷ್ಕ್ರಿಯಗೊಂಡ ಮಹಿಳೆಯ ಅಂಗಾಂಗ ದಾನ; ಸಾರ್ಥಕತೆ ಮೆರೆದ ಕುಟುಂಬ
2 ನಿಮಿಷದಲ್ಲಿ ವಿಮಾನ ನಿಲ್ದಾಣ ತಲುಪಿದ ಯಕೃತ್: ಪ್ರಕಾಶ್ ಲಮಾಣಿ ಅಂಗಾಂಗ ದಾನದ ಕುರಿತು ಕಿಮ್ಸ್ ವೈದ್ಯರ ತಂಡ ಕುಟುಂಬಸ್ಥರೊಂದಿಗೆ ಚರ್ಚಿಸಿ ಬೆಂಗಳೂರಿನ ಜೆ.ಪಿ. ನಗರದ ಆಸ್ಟರ್ ಆರ್.ವಿ. ಆಸ್ಪತ್ರೆಯ ರೋಗಿಯೊಬ್ಬರಿಗೆ ಯಕೃತ್ ಕಸಿ ಅಗತ್ಯವಿದ್ದ ಹಿನ್ನೆಲೆ ರವಾನೆ ಮಾಡಲಾಯಿತು.
ವೈದ್ಯರ ಕೋರಿಕೆ ಮೇರೆಗೆ ಕಿಮ್ಸ್ನಿಂದ ವಿಮಾನ ನಿಲ್ದಾಣದವರೆಗೆ 6.5 ಕಿ.ಮೀ. ಮಾರ್ಗವನ್ನು ಝೀರೋ ಟ್ರಾಫಿಕ್ ಮಾಡಲಾಗಿತ್ತು. ಕೇವಲ ಎರಡು ನಿಮಿಷದಲ್ಲಿ ವಿಮಾನ ನಿಲ್ದಾಣ ತಲುಪಿದ ಆ್ಯಂಬುಲೆನ್ಸ್ ಸ್ಟಾರ್ ಏರ್ ವಿಮಾನದ ಮೂಲಕ ಬೆಂಗಳೂರಿಗೆ ಯಕೃತ್ ಕೊಂಡೊಯ್ಯುವಲ್ಲಿ ವೈದ್ಯಕೀಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಕಿಡ್ನಿಯನ್ನ ಕಿಮ್ಸ್ ನಲ್ಲಿಯೇ ದಾಖಲಾದ 39 ವರ್ಷದ ವ್ಯಕ್ತಿಗೆ ಕಸಿ ಮಾಡಲಾಗಿದೆ.
ಇದನ್ನೂ ಓದಿ: ಜೀರೋ ಟ್ರಾಫಿಕ್ನಲ್ಲಿ ಬೆಳಗಾವಿ ಕೆಇಎಲ್ ಆಸ್ಪತ್ರೆಗೆ ಕಿಡ್ನಿ ರವಾನೆ