ಧಾರವಾಡ: ಜೆಡಿಎಸ್ನವರು ಹೆಚ್ ವಿಶ್ವನಾಥ ಅವರಿಂದ ಕಲಿಯಬೇಕಾಗಿಲ್ಲ. ಈಗ ಅವರು ದೊಡ್ಡ ಪಕ್ಷಕ್ಕೆ ಸೇರಿದ್ದಾರೆ. ಸಣ್ಣ ಪಕ್ಷಗಳ ಬಗ್ಗೆ ಏಕೆ ಅವರು ಮಾತನಾಡಬೇಕು ಎಂದು ಮಾಜಿ ಶಾಸಕ ಎನ್.ಹೆಚ್.ಕೋನರೆಡ್ಡಿ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್. ವಿಶ್ವನಾಥ ಅವರು ಜೆಡಿಎಸ್ ಅಧಿಕಾರಕ್ಕಾಗಿ ಯಾರ ಯಾರ ಜೊತೆಯೋ ಹೋಗುತ್ತದೆ ಎಂದು ಹೇಳಿದ್ದಾರೆ. ಹಾಗಾದ್ರೆ, ಅವರು ಯಾಕೆ ಬಿಜೆಪಿ ಸೇರಿದ್ರು.
17 ಜನ ಸ್ವಾರ್ಥ ಇಲ್ಲದೇ ಬಿಜೆಪಿಗೆ ಹೋದ್ರಾ ಎಂದು ಪ್ರಶ್ನಿಸಿದರು. ಪಾಪ ವಿಶ್ವನಾಥ ಅವರು ಈಗ ಮಂತ್ರಿಯೂ ಆಗದಂತೆ ಆಗಿದೆ. ಇದರ ಬಗ್ಗೆ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಿಟ್ಟು ಹೋದ ಪಕ್ಷದ ಬಗ್ಗೆ ಮಾತನಾಡಬೇಡಿ ಎಂದು ಹರಿಹಾಯ್ದರು.
ಜೆಡಿಎಸ್ ಪ್ರೊಡಕ್ಷನ್ ಫ್ಯಾಕ್ಟರಿ : ನಮ್ಮ ಪಕ್ಷದಲ್ಲಿ ಬೆಳೆದು ಹೋದವರೆಲ್ಲಾ ಬೈಯ್ತಾರೆ. ಬಿಜೆಪಿ ಸರ್ಕಾರದಲ್ಲಿ ಶೇ.60ಕ್ಕೂ ಹೆಚ್ಚು ಜನ ಜೆಡಿಎಸ್ ಮೂಲದ ಸಚಿವರು ಇದ್ದಾರೆ. ಕಾಂಗ್ರೆಸ್ನಲ್ಲಿ ಕೂಡ ನಮ್ಮವರಿದ್ದಾರೆ. ಒಂದು ರೀತಿ ಜೆಡಿಎಸ್ ಪ್ರೊಡಕ್ಷನ್ ಫ್ಯಾಕ್ಟರಿ ಆಗಿದೆ ಎಂದರು.
ಮಹಾದಾಯಿ ಮುಗಿದು ಹೋದ ಅಧ್ಯಾಯ : ಮಹದಾಯಿ ವಿಚಾರದಲ್ಲಿ ಗೋವಾ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಹದಾಯಿ ವಿವಾದ ಮುಗಿದ ಅಧ್ಯಾಯ.
ಇನ್ನು ಮಹದಾಯಿ ಕಾಮಗಾರಿ ಆರಂಭಿಸಬೇಕಿದೆ. ಇದಕ್ಕೆ ಪ್ರತಿ ಹಂತದಲ್ಲಿ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕಿದೆ. ಸಿಎಂ ಮತ್ತು ರಮೇಶ ಜಾರಕಿಹೊಳಿ ಸುಮ್ಮನೆ ಕೂತಿದ್ದಾರೆ. ಇವರು ಸುಮ್ಮನೆ ಕೂತಿದ್ದಕ್ಕೆ ಗೋವಾದವರು ಎದ್ದು ನಿಂತಿದ್ದಾರೆ ಎಂದರು.
ಕೇಂದ್ರದ ಸಪ್ಪೆ ಬಜೆಟ್ : ಕೇಂದ್ರ ಬಜೆಟ್ ಬಗ್ಗೆ ಮಾತನಾಡಿದ ಅವರು, ಹಳೇ ಬಾಟಲಿಯಲ್ಲಿ ಹೊಸ ನೀರು ಹಾಕಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಪ್ಪೆ ಬಜೆಟ್ ನೀಡಿದ್ದಾರೆ ಎಂದರು.