ಹುಬ್ಬಳ್ಳಿ : ಹಳೆ ಹುಬ್ಬಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹುಬ್ಬಳ್ಳಿ ಕೇಶ್ವಾಪುರ ಟ್ರಾಫಿಕ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನಾಗೇಶ್ ಕಾಡದೇವರಮಠ ತೀವ್ರವಾಗಿ ಗಾಯಗೊಂಡಿದ್ದರು. ಅವರ ಮನೆಗೆ ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಸ್ವಾಮೀಜಿಗಳ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಮುಖಂಡರಾದ ಬಂಗಾರೇಶ ಹಿರೇಮಠ, ರಾಜಶೇಖರ ಮೆಣಸಿನಕಾಯಿ,ಪ್ರಕಾಶ ಗೌಡ ಪಾಟೀಲ್, ಸುರೇಶ್ ಸವಣೂರು ಹಾಗೂ ಅಲ್ಪಸಂಖ್ಯಾತ ಮುಖಂಡರುಗಳಾದ ಬಾಬಾಜಾನ್ ಮುಧೋಳ್, ಫಾರೂಖ್ ಅಬ್ಬುನವರ ಅವರನ್ನು ಒಳಗೊಂಡ ನಿಯೋಗ ಭೇಟಿ ನೀಡಿ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿತು.
ಈ ವೇಳೆ ಸಿಪಿಐ ಕಾಡದೇವರಮಠ ಅವರ ಸೇವೆಗೆ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೇ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಅವರ ದೂರದೃಷ್ಟಿಯುಳ್ಳ ಕಾರ್ಯ ಚಟುವಟಿಕೆಯನ್ನು ಮುಕ್ತವಾಗಿ ಶ್ಲಾಘಿಸಿದರು. ಮಹಾನಗರ ಜನತೆ ಶಾಂತಿ ಕಾಪಾಡಿಕೊಂಡು ಭಾವೈಕ್ಯತೆಯನ್ನು ಸಾರಬೇಕೆಂದು ಇದೇ ವೇಳೆ ಸ್ವಾಮೀಜಿ ಕರೆ ನೀಡಿದರು.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ: ನಿಷೇಧಾಜ್ಞೆ ಮುಂದುವರೆಸಿ ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್ ಆದೇಶ