ಹುಬ್ಬಳ್ಳಿ: ಗ್ರಾಪಂ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಬೆಂಬಲಿತ ಸದಸ್ಯರನ್ನು ಸನ್ಮಾನಿಸುವುದಕ್ಕಾಗಿ 30 ಜಿಲ್ಲೆಗಳಲ್ಲಿ ಜನಸೇವಕ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಹೇಳಿದರು.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಜನಸೇವಕ ಸಮಾವೇಶಕ್ಕಾಗಿ 5 ತಂಡಗಳನ್ನು ರಚಿಸಲಾಗಿದೆ. ಮೊದಲ ತಂಡದ ನೇತೃತ್ವವನ್ನು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್, 2 ನೇ ತಂಡದ ನೇತೃತ್ವವನ್ನು ಸಚಿವ ಕೆ.ಎಸ್. ಈಶ್ವರಪ್ಪ, 3, 4 ಮತ್ತು 5 ನೇ ತಂಡದ ನೇತೃತ್ವವನ್ನು ಕ್ರಮವಾಗಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಜಗದೀಶ್ ಶೆಟ್ಟರ್, ಡಾ. ಅಶ್ವತ್ಥ್ ನಾರಾಯಣ ವಹಿಸುವರು. ಜ. 11 ರಿಂದ 13ರವರೆಗೆ ಸಮಾವೇಶ ನಡೆಯಲಿದ್ದು, ಜ.11 ರಂದು ಮುಖ್ಯಮಂತ್ರಿ ಯಡಿಯೂರಪ್ಪ ಮೈಸೂರಿನಲ್ಲಿ ಸಮಾವೇಶಕ್ಕೆ ಚಾಲನೆ ನೀಡುವರು ಎಂದು ತಿಳಿಸಿದರು.
ನಿತ್ಯ 2 ಜಿಲ್ಲೆಗಳಲ್ಲಿ 2 ಸಮಾವೇಶ ನಡೆಯಲಿವೆ. ಮುಂದಿನ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಸಿದ್ಧತೆಗೂ ಈ ಸಮಾವೇಶದ ಮೂಲಕ ಚಾಲನೆ ನೀಡಲಾಗುವುದು. ಜ. 17 ರಂದು ಮಧ್ಯಾಹ್ನ 3 ಗಂಟೆಗೆ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸಮಾವೇಶದ ಸಮಾರೋಪದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಾಲ್ಗೊಳ್ಳುವರು. ಧಾರವಾಡ ಜಿಲ್ಲೆಯ ಜನಸೇವಕ ಸಮಾವೇಶ ಜ. 10 ರಂದು ಬೆಳಗ್ಗೆ ಹುಬ್ಬಳ್ಳಿಯ ಗೋಕುಲ ಗಾರ್ಡನ್ನಲ್ಲಿ ನಡೆಯಲಿದೆ. ಬಿಜೆಪಿ ಬೆಂಬಲಿತ ಗ್ರಾಪಂನ ನೂತನ 1,216 ಸದಸ್ಯರು ಪಾಲ್ಗೊಳ್ಳವರು ಎಂದರು.