ಧಾರವಾಡ: ಆ್ಯಪಲ್ ಹಾರಗಳನ್ನ ಸರ್ಕಾರ ಬ್ಯಾನ್ ಮಾಡಬೇಕು. ಹಸಿದವರಿಗೆ ಕೊಟ್ಟರೆ ಎಷ್ಟೋ ಉಪಯೋಗ ಆಗತ್ತೆ ಎಂದು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ನಿಂತವರು ಎಲ್ಲರೂ ಹಣ, ಸಾರಾಯಿ, ಸೀರೆ ಹಂಚುವುದು ಸೇರಿದಂತೆ ಎಲ್ಲ ಕೆಲಸವನ್ನೂ ಮಾಡುತ್ತಾರೆ. ಜನರು ಬುದ್ಧಿವಂತರಾಗುವವರೆಗೆ ಏನು ಮಾಡಲು ಆಗುವುದಿಲ್ಲ. ಭ್ರಷ್ಟಾಚಾರ ಹೆಚ್ಚಾಗಿದೆ. ಕೆಲಸ ಮಾಡಿದ್ದನ್ನು ಯಾರು ನೋಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉಪ ಚುನಾವಣೆ ಬಳಿಕ ರಾಜ್ಯ ರಾಜಕೀಯ ಬದಲಾವಣೆ ಕುರಿತು ಮಾತನಾಡಿದ ಅವರು, ಘಟಬಂಧನ ಒಮ್ಮೆ ಆಗೊತ್ತೆ, ಒಮ್ಮೆ ಆಗೋದಿಲ್ಲ. ಏನಾಗುತ್ತದೆ ಅನ್ನೋದನ್ನ ವಿಚಾರ ಮಾಡಲು ಆಗೋದಿಲ್ಲ. ಅಚ್ಚರಿ ಪಡುವ ಸಂಗತಿಗಳು ನಡೆಯುತ್ತವೆ ಎಂದರು.
ನಿಖಿಲ್ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರ್ ಯಾರ್ ಹಣೆಬರಹದಲ್ಲಿ ಏನಿದೆ ಗೊತ್ತಿಲ್ಲ. ಏನು ಆಗುತ್ತಾರೆ ಆಗಲಿ. ನಮ್ಮ ಮಾತಿಗೆ ಮಿತಿ ಇರಬೇಕು. ನಿಖಿಲ್ ಒಳ್ಳೆಯ ಹುಡುಗ ಇದ್ದಾನೆ. ರಾಜಕೀಯವಾಗಿ ಬೆಳೆಯಲಿ. ಆದರೆ ಅತಿಯಾದ ರಂಜಿತವಾದ ಕೆಲಸಗಳನ್ನು ಯಾರು ಮಾಡಬಾರದು ಎಂದು ಹೇಳಿದರು.
ಉಪ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲುವ ಸ್ಥಾನಗಳ ಕುರಿತು ನಾನು ಭವಿಷ್ಯ ಕೇಳಲ್ಲ, ಹೇಳೋದೂ ಇಲ್ಲ. ಗೆದ್ದಾಗ ಎಷ್ಟು ಸ್ಥಾನ ಗೆದ್ವಿ ಅನ್ನೋದನ್ನ ಹೇಳ್ತಿನಿ. ಇವತ್ತು ಬಿಜೆಪಿ ಎಂಟು ಸ್ಥಾನಕ್ಕಿಂತ ಹೆಚ್ಚು ಗೆದ್ದರೆ ಸರ್ಕಾರ ನಡೆಯುತ್ತೆ. ಗೆದ್ದವರೆಲ್ಲ ಮಂತ್ರಿಗಳಾಗುತ್ತಾರೆ. ಆಗ ಏನಾಗುತ್ತದೆಯೋ ದೇವರಿಗೆ ಗೊತ್ತು. ಅಕಸ್ಮಾತ್ ಎಂಟಕ್ಕಿಂತ ಕಡಿಮೆ ಗೆದ್ದರೆ ಜೆಡಿಎಸ್ ಜೊತೆ ಮೈತ್ರಿ ಆಗಬಹುದು. ಜೆಡಿಎಸ್-ಬಿಜೆಪಿ ಸೇರಿ ಸರ್ಕಾರ ರಚನೆಯಾದ್ರೆ ಅಚ್ಚರಿ ಪಡಬೇಕಾಗಿಲ್ಲ ಎಂದರು.