ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರ ಬಿದ್ದ ಬಳಿಕ ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದೇನೆ. ನಮ್ಮ ಸರ್ಕಾರ ಇರುತ್ತೆ ಅಂದುಕೊಂಡಿದ್ದೆ. ಆದರೆ, ಆಪರೇಷನ್ ಮಾಡಿ ಬಿಜೆಪಿ ಸರ್ಕಾರ ರಚಿಸಿದೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕಷ್ಟ ಕಾಲದಲ್ಲಿ ಸಹಕರಿಸಿದ ಹಾಗೂ ಹೋರಾಡಿದ ಜನರಿಗೆ ಕೃತಜ್ಞತೆ ತಿಳಿಸಲು ಇಂದು ಮತ್ತು ನಾಳೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಪ್ರಜಾಪ್ರಭುತ್ವದಲ್ಲಿ ಏನು ಆಗಬಾರದೋ ಅದಾಗಿದೆ. ಅದರ ಬಗ್ಗೆ ಈಗಲೇ ಮಾತನಾಡುವುದಿಲ್ಲ ಎಂದರು.
ಈ ಭಾಗದ ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಸಚಿವರಾಗಿದ್ದಾರೆ. ಆದ್ರೆ ಮಹದಾಯಿ ಬಗ್ಗೆ ಹೋರಾಟ ಮಾಡುತ್ತಿಲ್ಲ. ಹೆದರಿಕೊಂಡು ಬಾಯಿ ಬಿಡುತ್ತಿಲ್ಲ. ಅವರೆಲ್ಲ ಸಚಿವ ಸ್ಥಾನದಲ್ಲಿರಲು ಲಾಯಕ್ಕಿಲ್ಲ. ಹೀಗಾಗಿ ಅವರೆಲ್ಲ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಈ ಬಗ್ಗೆ ನ್ಯಾಯಾಲಯದಲ್ಲಿ ತೀರ್ಪಿದ್ದರೂ ಒಂದು ಗೆಜೆಟ್ ನೋಟಿಫಿಕೇಷನ್ ಹೊರಡಿಬೇಕಿತ್ತು. ಅನರ್ಹ ಶಾಸಕರಿಗೆ ಡಿಸಿಎಂ, ಸಚಿವ ಸ್ಥಾನ ನೀಡುವುದಾಗಿ ಬಿಜೆಪಿ ಹೇಳಿದೆ. ಇದೊಂದು ಸಣ್ಣ ಕೆಲಸ ಮಾಡಲು ಆಗುವುದಿಲ್ಲವೇ ಎಂದ ಡಿಕೆಶಿ ಸಚಿವ ಸ್ಥಾನ ನೀಡುವುದಾಗಿ ಹೇಳಿರುವುದು ಭ್ರಷ್ಟಾಚಾರ ಅಲ್ಲವೇ ಎಂದು ಪ್ರಶ್ನಿಸಿದರು.