ಹುಬ್ಬಳ್ಳಿ: ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಒಳಗಾದವರು ಮತ್ತು ನಿರ್ಧಿಷ್ಠ ಅವಧಿಗೆ ಶಿಕ್ಷೆಗೆ ಒಳಗಾಗುವ ಅಪರಾಧ ಪ್ರಕರಣ ಹೊಂದಿದ್ದ 11 ಜನ ಕೈದಿಗಳನ್ನು ಇಲ್ಲಿನ ಉಪ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿದೆ.
ಕೊರೊನಾ ಸೋಂಕು ವ್ಯಾಪಕವಾಗಿ ಹರಡುವ ಆತಂಕವಿರುವ ಕಾರಣ ಕಾರಾಗೃಹದಲ್ಲಿರುವ ಕೈದಿಗಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಏಳು ವರ್ಷಗಳಿಗಿಂತ ಕಡಿಮೆ ಶಿಕ್ಷೆ ಎದುರಿಸುತ್ತಿರುವ ಕೈದಿಗಳ ಪಟ್ಟಿ ಸಿದ್ಧಪಡಿಸುವಂತೆ ಎಲ್ಲ ಜೈಲುಗಳ ಮುಖ್ಯಸ್ಥರಿಗೆ ಮೇಲಾಧಿಕಾರಿಗಳು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಇಲ್ಲಿನ ಉಪ ಕಾರಾಗೃಹದ ಅಧೀಕ್ಷಕ ಅಶೋಕ ಭಜಂತ್ರಿ ಅವರು 34 ಜನ ಕೈದಿಗಳ ಪಟ್ಟಿ ಕಳುಹಿಸಿದ್ದರು. ಇದರಲ್ಲಿ 11 ಕೈದಿಗಳ ಬಿಡುಗಡೆಗೆ ಮೇಲಧಿಕಾರಿಗಳು ಸಮ್ಮತಿ ಸೂಚಿಸಿದ್ದಾರೆ.
‘ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಗೆ ಒಳಗಾದ ಇನ್ನಷ್ಟು ಕೈದಿಗಳ ಪಟ್ಟಿಯನ್ನು ಮತ್ತೆ ಮೇಲಧಿಕಾರಿಗಳಿಗೆ ಕಳುಹಿಸಲಾಗುವುದು. ಅವರ ಅನುಮತಿ ಸಿಕ್ಕ ಬಳಿಕ ಮತ್ತಷ್ಟು ಕೈದಿಗಳನ್ನು ಬಿಡುಗಡೆ ಮಾಡಲಾಗುವುದು. ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆ. ಕೈದಿಗಳನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತಿದೆ’ ಎಂದು ಭಜಂತ್ರಿ ತಿಳಿಸಿದ್ದಾರೆ.