ಹುಬ್ಬಳ್ಳಿ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಂಗಾರು ಬೆಳೆಯಾದ ಶೇಂಗಾ ಬೆಳೆಗೆ ಬೂದಿ ಬಣ್ಣದ ರೋಗ ಲಕ್ಷಣಗಳು ಕಂಡು ಬಂದಿದ್ದು, ರೈತರಿಗೆ ಆತಂಕ ಹೆಚ್ಚಾಗಿದೆ.
ಕುಂದಗೋಳ ತಾಲೂಕಿನಲ್ಲಿ ಶೇಂಗಾ ಬೆಳೆಗೀಗ ಬೂದಿ ರೋಗ ಆವರಿಸಿದ್ದು, ಉತ್ತಮವಾಗಿ ಬೆಳೆದ ಬೆಳೆಯ ಎಲೆಗಳ ಮೇಲೆ ಹಸಿರು ಸೀರು ಹರಿದಾಡುತ್ತಾ ಎಲೆಗಳನ್ನು ತಿಂದು ಬೆಳೆ ಹಾನಿ ಮಾಡುತ್ತಿವೆ. ಈ ಸಾರಿ ಸುರಿದ ಮಳೆಗೆ ಹೊಲದಲ್ಲಿ ನೀರು ನಿಂತು ಉಂಟಾದ ಈ ಬೂದಿ ರೋಗ ಕ್ರಮೇಣ ಇಡೀ ಹೊಲಕ್ಕೆ ಹಬ್ಬಿದೆ. ರೈತಾಪಿ ವರ್ಗದ ಜನರು ಮುನ್ನೆಚ್ಚರಿಕೆ ಕ್ರಮವಾಗಿ ಕ್ರಿಮಿನಾಶಕ ಸಿಂಪಡಣೆ ಕಾರ್ಯ ಕೈಗೊಂಡಿದ್ದು, ಫಸಲನ್ನು ಉಳಿಸಿಕೊಳ್ಳುವ ಸಲುವಾಗಿ ಕೊರೊನಾ ಕಷ್ಟದಲ್ಲಿಯೂ ಮತ್ತೆ ಹಣ ಹೂಡಿ ಔಷಧಿ ಸಿಂಪಡಣೆ ಕಾರ್ಯಕ್ಕೆ ಮುಂದಾಗಿದ್ದಾರೆ.
ಕೃಷಿ ಚಟುವಟಿಕೆಯಲ್ಲಿ ಈ ಮೊದಲು ಮುಂಗಾರಿನ ಹತ್ತಿ, ಹೆಸರು, ಮೆಣಸಿನಗಿಡ, ಅಲಸಂದೆ ಬೆಳೆಗಳಿಗಷ್ಟೇ ರೋಗ ಕಂಡುಬಂದಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡುತ್ತಿದ್ದ ರೈತರು, ಇತ್ತೀಚೆಗೆ ಶೇಂಗಾ ಬೆಳೆಗೂ ಸಹ ಕ್ರಿಮಿನಾಶಕ ಸಿಂಪಡಣೆ ಮಾಡುವುದು ಅನಿವಾರ್ಯವಾಗಿದೆ.