ಹುಬ್ಬಳ್ಳಿ/ವಿಜಯಪುರ: ಮೊದಲ ಹಂತದ ಲಸಿಕಾಕರಣಕ್ಕೆ ಕಿಮ್ಸ್ನಲ್ಲಿ ಪ್ರಥಮ ಫಲಾನುಭವಿಯಾಗಿ ಗುರುತಿಸಿದ ಗುತ್ತಿಗೆ ಆಧಾರದಲ್ಲಿ ಗ್ರೂಪ್ ಡಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ರೀನಿವಾಸ ಬಳ್ಳಾರಿ ಹಾಗೂ ಶಸ್ತ್ರಚಿಕಿತ್ಸೆ ವಿಭಾಗದ ಪ್ರಾಧ್ಯಾಪಕ ಡಾ.ನಾರಾಯಣ ಹೆಬಸೂರ ಅವರಿಗೆ ಸಚಿವರು ಹಾಗೂ ಗಣ್ಯರ ಸಮ್ಮುಖದಲ್ಲಿ ಕೋವಿಶೀಲ್ಡ್ ಲಸಿಕೆ ನೀಡಲಾಯಿತು.
ಕಿಮ್ಸ್ನಲ್ಲಿ ಮೊಟ್ಟ ಮೊದಲ ಲಸಿಕೆ ಪಡೆದ ಹೊರಗುತ್ತಿಗೆ ನೌಕರ ಶ್ರೀನಿವಾಸ ಬಳ್ಳಾರಿ ಮಾತನಾಡಿ, ಕಳೆದ ಏಳೆಂಟು ತಿಂಗಳುಗಳಿಂದ ನಮ್ಮ ಪ್ರಾಣವನ್ನೂ ಲೆಕ್ಕಿಸದೇ ಕೊರೊನಾ ವಿರುದ್ಧ ಹೋರಾಡಿದ್ದೇವೆ. ಇದೀಗ ಮೊದಲ ಹಂತದಲ್ಲಿಯೇ ಲಸಿಕೆ ನೀಡಲು ನಮ್ಮನ್ನು ಗುರುತಿಸಿರುವುದು ಸಂತಸ ತಂದಿದೆ. ಮೊದಲಿಗೆ ಒಂದು ಸಣ್ಣ ಮಟ್ಟದ ಆತಂಕ ಇತ್ತು. ಕಿಮ್ಸ್ ವೈದ್ಯರು ತಿಳಿವಳಿಕೆ ನೀಡಿ ಭರವಸೆ ನೀಡಿದರು. ಲಸಿಕೆ ಪಡೆದು ಯಾವುದೇ ಸಮಸ್ಯೆ ಇಲ್ಲ, ಆರಾಮವಾಗಿದ್ದೇನೆ ಎಂದು ಅನುಭವ ಹಂಚಿಕೊಂಡರು.
ವೈದ್ಯರ ವಿಭಾಗದಲ್ಲಿ ಮೊಟ್ಟ ಮೊದಲ ಲಸಿಕೆ ಪಡೆದ ಕಿಮ್ಸ್ ಪ್ರಾಧ್ಯಾಪಕ ಹಾಗೂ ಶಸ್ತ್ರಚಿಕಿತ್ಸಕ ಡಾ.ನಾರಾಯಣ ಹೆಬಸೂರ ಮಾತನಾಡಿ, ಲಸಿಕೆಯು ಕೊರೊನಾ ತಡೆಯಲು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಂಪೂರ್ಣ ಪೂರಕವಾಗಿದೆ. ಕರ್ತವ್ಯ ನಿರ್ವಹಿಸುತ್ತಿರುವ ಮಾತೃ ಸಂಸ್ಥೆಯಲ್ಲಿಯೇ ಲಸಿಕೆ ಪಡೆದಿರುವುದು ಹೆಮ್ಮೆ ಮೂಡಿಸಿದೆ. ವೈದ್ಯನಾಗಿ ಸ್ವತಃ ಲಸಿಕೆ ಹಾಕಿಸಿಕೊಂಡಾಗ ಸಾರ್ವಜನಿಕರಲ್ಲಿ ಹೆಚ್ಚು ಜಾಗೃತಿ ಬರಲಿದೆ. ಆದ್ದರಿಂದ ಸ್ವ ಇಚ್ಛೆಯಿಂದ ಇಂದು ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡಿರುವೆ. ಇದರಿಂದ ಯಾವುದೇ ಅಡ್ಡಪರಿಣಾಮವಿಲ್ಲ, ಎಲ್ಲರೂ ಯಾವುದೇ ಆತಂಕವಿಲ್ಲದೆ ಲಸಿಕೆ ಹಾಕಿಸಿಕೊಳ್ಳಬೇಕು ಎಂದರು.
ವಿಜಯಪುರದಲ್ಲೂ ಕೋವಿಡ್-19 ಲಸಿಕೆಯನ್ನು ಕೊರೊನಾ ವಾರಿಯರ್ಸ್ಗೆ ನೀಡಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಗ್ರೂಪ್ ಡಿ ನೌಕರ ಲಕ್ಷ್ಮಣ್ ಕೊಳೂರಗಿ (57) ಕೋವಿಡ್-19 ಪ್ರಥಮ ಲಸಿಕೆಯನ್ನು ಜಿಲ್ಲಾ ಆಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ ಪಡೆದರು. ಬಳಿಕ ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಶ್ರೀಶೈಲ್ ಶಿವಪ್ಪ ಚಟ್ಟರ್ (59) ಲಸಿಕೆ ಪಡೆದಿದ್ದಾರೆ.
ಜಿಲ್ಲಾ ಆಸ್ಪತ್ರೆಯ ಗ್ರೂಪ್ ಡಿ ನೌಕರ ಬಾಬಾಜಾನ್ ತಾಜಿಂತರಕ್ (33) ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಕಂಪ್ಯೂಟರ್ ಆಪರೇಟರ್ ಮೀನಾಕ್ಷಿ ಸಲಗರ್ ಕೂಡಾ ವ್ಯಾಕ್ಸಿನ್ ಪಡೆದಿದ್ದಾರೆ.
ಸಂಜೆ 5ರವರೆಗೆ ಜಿಲ್ಲೆಯ 8 ಕೇಂದ್ರದಲ್ಲಿ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಒಟ್ಟು ಜಿಲ್ಲೆಗೆ 9,500 ಡೋಸ್ ದೊರೆತಿದ್ದು, ಇಂದು 800 ಕೊರೊನಾ ವಾರಿಯರ್ಸ್ ಲಸಿಕೆ ಪಡೆದಿದ್ದಾರೆ. ಒಂದು ಸೆಂಟರ್‌ನಲ್ಲಿ 100 ಜನರಿಗೆ ಲಸಿಕೆ ಹಾಕಲಾಗುತ್ತಿದೆ.
ವಿಜಯ ಪುರ ಜಿಲ್ಲಾಸ್ಪತ್ರೆ, ಬಿಎಲ್ಡಿ ಆಸ್ಪತ್ರೆ, ಮನಗೂಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ಬಸವನ ಬಾಗೇವಾಡಿ ತಾಲೂಕು ಆಸ್ಪತ್ರೆ, ಇಂಡಿ ಸರ್ಕಾರಿ ಆಸ್ಪತ್ರೆ, ಮುದ್ದೇಬಿಹಾಳ ತಾಲೂಕು ಆಸ್ಪತ್ರೆ, ಸಿಂದಗಿ ತಾಲೂಕು ಆಸ್ಪತ್ರೆ, ವಿಜಯಪುರದ ದರ್ಗಾ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿ 8 ಕಡೆಗಳಲ್ಲಿ ಲಸಿಕೆ ನೀಡಲಾಯಿತು. 15,820 ಕೊರೊನಾ ವಾರಿಯರ್ಸ್ ತಂತ್ರಾಂಶದ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ.