ಹುಬ್ಬಳ್ಳಿ: ರಾಜ್ಯ ಸರ್ಕಾರ ಹಾಗೂ ಅಬಕಾರಿ ಇಲಾಖೆ ಆದಾಯ ಸಂಗ್ರಹಕ್ಕಾಗಿ ಅಡ್ಡದಾರಿ ಹಿಡಿದಿರುವ ಆಘಾತಕಾರಿ ಅಂಶ ಬಹಿರಂಗವಾಗಿದೆ. ಸರ್ಕಾರ ಅಬಕಾರಿ ಇಲಾಖೆಗೆ ಎಕ್ಸ್‌ಪೈರಿ ಡೇಟ್ ಮುಗಿದ ಬಿಯರ್ ಮಾರಲು ಒತ್ತಡ ಹೇರುತ್ತಿದೆ. ಆದ್ರೆ ಇದಕ್ಕೆ ಸನ್ನದುದಾರರು ನಕಾರ ವ್ಯಕ್ತಪಡಿಸಿದ್ದಾರೆ.
ಅವಧಿ ಮೀರಿದ ಬಿಯರ್ ದಾಸ್ತಾನು ಮಾರಾಟಕ್ಕೆ ಇಲಾಖೆ ಅನುಮತಿ ನೀಡಿದೆ. ಧಾರವಾಡ ಜಿಲ್ಲೆಯಲ್ಲಿ 7165 ಪೆಟ್ಟಿಗೆ ಬಿಯರ್ ಸಂಗ್ರಹವಿದೆ. ಒಂದು ಪೆಟ್ಟಿಗೆಯಲ್ಲಿ 7.8 ಲೀಟರ್ ಬಿಯರ್ ಮಾರಾಟವಾಗದೇ ಉಳಿದಿದ್ದು, ಅವಧಿ ಮೀರಿದ ಬಿಯರ್ ದಾಸ್ತಾನು ಮಾರಾಟಕ್ಕೆ ಇಲಾಖೆಯಿಂದ ಅನುಮತಿ ನೀಡಿದ್ದು, ಇದರಿಂದ ಸನ್ನದುದಾರರು ಕಕ್ಕಾಬಿಕ್ಕಿಯಾಗಿದ್ದಾರೆ.
ಹೀಗಾಗಿ ಅಮಲೇರಿಸಿಕೊಳ್ಳಲು ಬರುವವರು ತಿರುಗಿಬಿದ್ದರೆ ಹೇಗೆ ಎಂಬ ಆತಂಕ ಕಾಡುತ್ತಿದೆ. ಲಾಕ್ಡೌನ್ ಸಂದರ್ಭದಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಲಾಕ್ಡೌನ್ ಸಡಿಲಿಕೆಯಿಂದ ಕೊಂಚ ನಿರಾಳತೆ ನೀಡಿ ಮಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಆದ್ರೆ ಲಾಕ್ಡೌನ್ ಸಂದರ್ಭದಲ್ಲಿ ದಾಸ್ತಾನು ಆಗಿದ್ದ ಬಿಯರನ್ನು ಅವಧಿ ಮುಗಿದ ನಂತರವೂ ಮಾರಾಟಕ್ಕೆ ಅಬಕಾರಿ ಇಲಾಖೆ ಅನುಮತಿ ನೀಡಿದೆ.
ಕೋವಿಡ್‌ನಿಂದ ಉಂಟಾಗಿರುವ ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ರಾಜ್ಯ ಸರ್ಕಾರ ಅವಧಿ ಮುಗಿದ ಬಿಯರ್ ಮಾರಲು ಅನುಮತಿ ನೀಡಿ, ಅವಧಿ ಮೀರಿದ ಬಿಯರ್ ಮಾರಾಟ ಮಾಡಲು ಅನುಮತಿಯನ್ನು ಡಿ.31ರವರೆಗೆ ವಿಸ್ತರಣೆ ಮಾಡಿದೆ.
ಡಿಪೋಗಳಲ್ಲಿರುವ ಬಿಯರನ್ನು ರಾಸಾಯನಿಕ ಕೇಂದ್ರದ ಪ್ರಯೋಗಾಲಯಕ್ಕೆ ರವಾನಿಸಿ, ಆರೋಗ್ಯ ಇಲಾಖೆ ಅನುಮತಿ ಪಡೆದು ಮಾರಾಟಕ್ಕೆ ಅವಕಾಶ ನೀಡಬೇಕು. ಬಾರ್ಗಳಿಗೆ ಬರುವ ಗ್ರಾಹಕರಿಗೆ ಅವಧಿ ಮೀರಿದ ಬಿಯರ್ ನೀಡಿದರೇ ಗ್ರಾಹಕರ ಕೇಳುವ ಪ್ರಶ್ನೆಗಳಿಗೆ ಏನು ಉತ್ತರ ನೀಡಬೇಕು. ಗ್ರಾಹಕರು ಮದ್ಯ ಕುಡಿದು ಏನಾದ್ರೂ ಅವಘಡ ಆದ್ರೆ ಯಾರು ಹೊಣೆ ಎಂದು ಸನ್ನದುದಾರರು ಸರ್ಕಾರ ಹಾಗೂ ಅಬಕಾರಿ ಇಲಾಖೆಗೆ ಮರುಪ್ರಶ್ನೆ ಹಾಕುತ್ತಿದ್ದಾರೆ. ಸರ್ಕಾರ ಕೂಡಲೇ ಇಂತಹ ಗೊಂದಲಗಳಿಗೆ ತೆರೆ ಎಳೆಯಬೇಕೆಂದು ಬಾರ್ ಮಾಲೀಕರು ಒತ್ತಡ ಹಾಕುತ್ತಿದ್ದಾರೆ.