ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ 17 ಸಂಚಾರಿ ಸ್ವ್ಯಾಬ್ ಕಲೆಕ್ಷನ್ ಮಾಡುತ್ತಿದ್ದೇವೆ. ಈ ಮೊದಲು 3 ಸಾವಿರ ಸ್ವ್ಯಾಬ್ ಕಲೆಕ್ಷನ್ ಮಾಡುತ್ತಿದ್ದು, ಈಗ 4 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.
ಕಿಮ್ಸ್ ಆಸ್ಪತ್ರೆಯ ಕಾಮಗಾರಿ ವೀಕ್ಷಣೆ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಕೂಡ ಸ್ವ್ಯಾಬ್ ಪರೀಕ್ಷೆ ನಡೆಸುತ್ತಿದ್ದೇವೆ. ಜಿಲ್ಲಾಡಳಿತದ ನಿಯಮವನ್ನು ಪಾಲಿಸದಿರುವ ನಾಲ್ಕು ಖಾಸಗಿ ಆಸ್ಪತ್ರೆಗಳಿಗೆ ಡಿಎಚ್ಒ ಮೂಲಕ ನೋಟಿಸ್ ಕೂಡ ನೀಡಲಾಗಿದೆ. ಶುಕ್ರವಾರ 12 ಗಂಟೆಗೆ ಖಾಸಗಿ ಆಸ್ಪತ್ರೆಗಳ ಸಭೆ ಕರೆದಿದ್ದೇವೆ. ಈ ಬಗ್ಗೆ ಮತ್ತೊಮ್ಮೆ ಖಾಸಗಿ ಆಸ್ಪತ್ರೆಗಳಿಗೆ ಮನವರಿಕೆ ಮಾಡಲಾಗುತ್ತದೆ ಎಂದರು.
ಅನಾವಶ್ಯಕ ತಿರುಗಾಡುವವರಿಗೆ ನಿರ್ಬಂಧ:
ಜಿಲ್ಲಾಸ್ಪತ್ರೆ ಹಾಗೂ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ಅನಾವಶ್ಯಕವಾಗಿ ತಿರುಗಾಡುವ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸುವಂತೆ ಧಾರವಾಡ ಜಿಲ್ಲಾಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಕಿಮ್ಸ್ ಆಸ್ಪತ್ರೆಯ ನಿರ್ದೇಶಕರಿಗೆ ಆದೇಶಿಸಲಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ರಾಜ್ಯ ಸರ್ಕಾರದ ಆದೇಶದಂತೆ ಏ. 27 ರಿಂದ ಮೇ 12ರ ಬೆಳಿಗ್ಗೆ 6 ಗಂಟೆಯವರೆಗೆ ಜಿಲ್ಲೆಯಲ್ಲಿ ಕರ್ಫ್ಯೂ ಜಾರಿಯಲ್ಲಿದ್ದು, ವೈದ್ಯಕೀಯ ತುರ್ತು ಚಿಕಿತ್ಸೆಗಾಗಿ ರೋಗಿ ಹಾಗೂ ರೋಗಿಯ ಪರಿಚಾರಕರಿಗೆ ಸಡಿಲಿಕೆ ನೀಡಲಾಗಿದೆ.
ಆದರೆ, ಈ ಸಡಿಲಿಕೆಯನ್ನು ದುರುಪಯೋಗಪಡಿಸಿಕೊಂಡು ಜಿಲ್ಲಾಸ್ಪತ್ರೆ ಹಾಗೂ ಕಿಮ್ಸ್ ಆವರಣದಲ್ಲಿ ಸಾರ್ವಜನಿಕರು ಅನಾವಶ್ಯಕವಾಗಿ ತಿರಗಾಡುತ್ತಿರುವುದು ಹಾಗೂ ವೈದ್ಯಕೀಯ ಚಿಕಿತ್ಸೆ ಅಥವಾ ರೋಗಿಯ ಪರಿಚಾರಕರೆಂದು ನೆಪ ಹೇಳಿ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದೆ.
ಆದ್ದರಿಂದ ಅಗತ್ಯವಿದ್ದಲ್ಲಿ ರೋಗಿಯೊಂದಿಗೆ ಒಬ್ಬ ಪರಿಚಾರಕರು ಮತ್ತು ಆಸ್ಪತ್ರೆಗಳಿಗೆ ಕೋವಿಡ್ ಲಸಿಕೆ ತೆಗೆದುಕೊಳ್ಳಲು ಬರುವ ಸಾರ್ವಜನಿಕರು ಅವಶ್ಯಕ ದಾಖಲೆಗಳನ್ನು ಹೊಂದಿದ್ದಲ್ಲಿ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಬೇಕು. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ಭಾರತೀಯ ದಂಡ ಸಂಹಿತೆಯ ಕಲಂ 188ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ವಿಧಾನಸಭೆ ಸಚಿವಾಲಯದ ಮಹಿಳಾ ಶಾಖಾಧಿಕಾರಿ ಕೊರೊನಾಗೆ ಬಲಿ