ಧಾರವಾಡ : ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡುವ ಮೂಲಕ ವಿದ್ಯಾ ದೇಗುಲಗಳನ್ನು ಮಿಲ್ಟ್ರಿ ಹೋಟೆಲ್ ಮಾಡಬೇಡಿ ಎಂದು ಅಖಿಲ ಭಾರತ ಸಸ್ಯಹಾರಿ ಒಕ್ಕೂಟದ ಪ್ರಧಾನ ಸಂಚಾಲಕ ಶ್ರೀ ದಯಾನಂದ ಸ್ವಾಮೀಜಿ ಸರ್ಕಾರಕ್ಕೆ ಆಗ್ರಹಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ವಿತರಣೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಬಿಜೆಪಿ ಸರ್ಕಾರ ವಿದ್ಯಾರ್ಥಿಗಳಿಗೆ ಮೊಟ್ಟೆ ತಿನ್ನಿಸುವ ಕೆಲಸ ಪ್ರಾರಂಭಿಸಿದೆ.
ಸಸ್ಯಾಹಾರಿ ಧರ್ಮಿಯರ ಆಗ್ರಹಕ್ಕೆ ಸ್ಪಂದಿಸುತ್ತಿಲ್ಲ. ನಾಡಿನ ಪೂಜ್ಯರು, ಗಣ್ಯರೆಲ್ಲ ಬೇಡಿಕೊಂಡರೂ ಸರ್ಕಾರ ಕಿವುಡಾಗಿದೆ. ಮೊಟ್ಟೆ ನೀಡಿ ವಿದ್ಯಾ ದೇಗುಲಗಳನ್ನು ಮಿಲ್ಟ್ರಿ ಹೋಟೆಲ್ ಮಾಡಬೇಡಿ ಎಂದು ಶ್ರೀ ದಯಾನಂದ ಸ್ವಾಮೀಜಿ ಒತ್ತಾಯಿಸಿದರು.
ಸಸ್ಯಾಹಾರಿ ಮಕ್ಕಳಿಗೆ ಪ್ರತ್ಯೇಕ ಶಾಲೆ : ಮೊಟ್ಟೆಗೆ ಬದಲಾಗಿ ಅನೇಕ ಸಸ್ಯಹಾರಿ ಪೌಷ್ಟಿಕಾಂಶ ಪದಾರ್ಥಗಳಿವೆ. ಅವುಗಳನ್ನು ಮಕ್ಕಳಿಗೆ ನೀಡಬೇಕು. ಇಲ್ಲದಿದ್ದಲ್ಲಿ ಸಸ್ಯಾಹಾರಿ ಮಕ್ಕಳಿಗೆ ಪ್ರತ್ಯೇಕ ಶಾಲೆ ತೆರೆಯಬೇಕು. ಡಿ. 19ರೊಳಗೆ ಮೊಟ್ಟೆ ಆದೇಶ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ 20ರಂದು ಬೆಳಗಾವಿಯ ಸುವರ್ಣಸೌಧದ ಮುಂದೆ ಸಂತ ಸಮಾವೇಶ ಮಾಡುತ್ತೇವೆ, ಜೈಲ್ ಭರೋ ಸಹ ಮಾಡಲಾಗುತ್ತದೆ ಎಂದು ಶ್ರೀಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.