ಧಾರವಾಡ: ಅತಿವೃಷ್ಟಿ ಅಧ್ಯಯನಕ್ಕೆ ಆಗಮಿಸಿರುವ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳ ತಂಡವು ಅಳ್ನಾವರ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಿತು.
ಕೇಂದ್ರ ಕೃಷಿ ಹಾಗೂ ರೈತರ ಸಹಕಾರ ಮಾರುಕಟ್ಟೆ ಮಂತ್ರಾಲಯದ ಎಣ್ಣೆಬೀಜ ಅಭಿವೃದ್ಧಿ ನಿರ್ದೇಶಕ ಡಾ.ಮನೋಹರನ್, ಕೇಂದ್ರ ಜಲಶಕ್ತಿ ಮಂತ್ರಾಲಯದ ಅಧೀಕ್ಷಕ ಇಂಜಿನಿಯರ್ ಗುರುಪ್ರಸಾದ್ ಜೆ. ಅವರನ್ನೊಳಗೊಂಡ ತಂಡವು ಹುಲಿಕೆರೆ ಗ್ರಾಮದ ಇಂದಿರಮ್ಮನ ಕೆರೆಗೆ ಭೇಟಿ ನೀಡಿ ಇತ್ತೀಚೆಗೆ ಸುರಿದ ಮಳೆಯಿಂದ ಆಗಿರುವ ಹಾನಿ ಹಾಗೂ ಕಳೆದ ವರ್ಷ ಉಂಟಾಗಿದ್ದ ಪರಿಸ್ಥಿತಿಯ ಮಾಹಿತಿ ಪಡೆದರು.
ಸುಮಾರು 2.3 ಚ.ಕಿ.ಮೀ ವಿಸ್ತೀರ್ಣದ ಈ ಕೆರೆಯು ಅಳ್ನಾವರ ಪಟ್ಟಣಕ್ಕೆ ಕುಡಿಯುವ ನೀರು ಹಾಗೂ ಸುಮಾರು 1099 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಪ್ರತಿವರ್ಷ ಮಖೆಯಿಂದ ಉಂಟಾಗುವ ಹಾನಿ ತಪ್ಪಿಸಲು 4.5 ಕೋಟಿ ರೂ. ಮೊತ್ತ ಅಂದಾಜು ವೆಚ್ಚದ ಕಾಮಗಾರಿಯನ್ನು ರೂಪಿಸಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು.
ಅಳ್ನಾವರದ ಡೌಗಿನಾಲಾ ಕೊಚ್ಚಿ ಹೋಗಿ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿದು ಹೋಗುತ್ತಿರುವುದು. ಅರವಟಗಿಯ ಪಶು ವೈದ್ಯ ಚಿಕಿತ್ಸಾಲಯ ಸಂಪೂರ್ಣ ಬಿದ್ದು ಹೋಗಿರುವುದನ್ನು ಕೇಂದ್ರ ಪ್ರವಾಹ ಅಧ್ಯಯನ ತಂಡದ ಅಧಿಕಾರಿಗಳು ಖುದ್ದಾಗಿ ವೀಕ್ಷಿಸಿದರು.