ಹುಬ್ಬಳ್ಳಿ : ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಕೇವಲ ಬಿಜೆಪಿ ಅಜೆಂಡಾ ಆಗಿರಲಿಲ್ಲ. ಇದು ಎಲ್ಲಾ ಹಿಂದೂ ಸಮಾಜದ ಅಜೆಂಡಾ ಆಗಿತ್ತು ಎಂದು ವಿಶ್ವ ಹಿಂದೂ ಪರಿಷತ್ತಿನ ಕೇಂದ್ರೀಯ ಮಂತ್ರಿ ಮಿಲಿಂದ್ ಪರಾಂಡೆ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜಕೀಯ ಪಕ್ಷವಾದ ನಂತರ ತನ್ನ ಪ್ರಣಾಳಿಕೆಯಲ್ಲಿ ರಾಮ ಮಂದಿರ ವಿಷಯ ಸೇರಿಸಿದೆ. ಆದರೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಬೇಕೆಂಬ ಹಿಂದೂಗಳ ಕಲ್ಪನೆ ನೂರಾರು ವರ್ಷ ಹಳೆಯದ್ದಾಗಿದೆ ಎಂದರು.
ಇನ್ನು, ಮಂದಿರ ನಿರ್ಮಾಣಕ್ಕೆ ರಾಜಕೀಯ ಬೇಧ ಬೇಡ. ಎಲ್ಲ ರಾಜಕೀಯ ಪಕ್ಷಗಳು ಮಂದಿರ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದ ಅವರು, ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮ ಮಂದಿರ ಸಂಪೂರ್ಣ ಹಿಂದೂ ಸಮಾಜದ್ದಾಗಿದೆ. ಸಮಾಜದವರಿಂದ ಸಂಗ್ರಹಿಸಿರುವ ಹಣದಿಂದಲೇ ಮಂದಿರ ನಿರ್ಮಿಸಬೇಕೆಂದು ಉದ್ದೇಶಿಸಲಾಗಿದೆ.
ಹೀಗಾಗಿ ಸರ್ಕಾರದ ನೆರವು ಪಡೆಯುತ್ತಿಲ್ಲ. ಪ್ರತಿ ಹಿಂದೂಗಳ ಮನೆಯಿಂದ ಹಣ ಸಂಗ್ರಹಿಸಲಾಗುತ್ತಿದೆ. ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯದವರು ಮಂದಿರ ನಿರ್ಮಾಣಕ್ಕೆ ಹಣ ನೀಡಲು ಬಯಸಿದ್ರೆ ಅವರಿಂದಲೂ ಹಣ ಸಂಗ್ರಹಿಸಲಾಗುವುದು ಎಂದು ಮಿಲಿಂದ್ ಪರಾಂಡೆ ಹೇಳಿದರು.
ಈಗಾಗಲೇ ಹುಬ್ಬಳ್ಳಿಯ ನವನಗರ ಶಾಂತಿ ನಗರ ಮುಂತಾದ ಕಡೆಗಳಲ್ಲಿ ಶ್ರೀರಾಮನ ಪ್ರಚಾರಕರು ಧನಸಂಗ್ರಹ ಕಾರ್ಯಗಳಲ್ಲಿ ತೊಡಗಿದ್ದಾರೆ ಎಂದರು.
ಇದನ್ನೂ ಓದಿ: ಪ್ರವಾಸಿಗರಿಗೆ ನಿರಾತಂಕ.. ಏಕತಾ ಪ್ರತಿಮೆ ಸಂಪರ್ಕಿಸಲಿವೆ ಎಂಟು ರೈಲುಗಳು..