ಹುಬ್ಬಳ್ಳಿ: ಧಾರವಾಡ ರಾಜ್ಯದಲ್ಲಿ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಗೆ ಪಾತ್ರವಾಗಿದೆ. ಆದರೆ, ಪಾಲಿಕೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು, ವಾಣಿಜ್ಯ ನಗರಿಯಲ್ಲಿ ಹಳೆಯದಾದ ಹಾಗೂ ಶಿಥಿಲಗೊಂಡ ಕಟ್ಟಡಗಳ ತೆರವು ಕಾರ್ಯಾಚರಣೆಯೇ ತಲೆನೋವಾಗಿದೆ.
ಅವಳಿ ನಗರ ಬೆಳೆದಂತೆ ಹಳೆಯ ಹಾಗೂ ಶಿಥಿಲಗೊಂಡ ಕಟ್ಟಡಗಳಲ್ಲಿ ಜನರು ವಾಸಿಸುವುದು ಸಾಮಾನ್ಯ. ಆದರೆ, ಇಂತ ಕಟ್ಟಡಗಳು ಅಪಾಯಕ್ಕೆ ಆಹ್ವಾನವನ್ನು ನೀಡುತ್ತಿವೆ. ಅದರಲ್ಲೂ ಮಳೆಗಾಲದಲ್ಲಿ ಅತಿಯಾದ ಮಳೆಯಿಂದ ನೀರು ಹಿಡಿದು ಹಳೆಯ ಕಟ್ಟಡಗಳು ಕುಸಿದರೆ, ಪ್ರಾಣ ಹಾನಿ ಸಂಭವಿಸುತ್ತದೆ. ಅದಕ್ಕೆ ಮಹಾನಗರ ಪಾಲಿಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ನೋಟಿಸ್ ನೀಡಿ ತೆರವುಗೊಳಿಸುವ ಕೆಲಸ ಮಾಡುತ್ತಿದೆ.
ಕಳೆದ ವರ್ಷ ಮಹಾನಗರ ಪಾಲಿಕೆ 100ಕ್ಕೂ ಅಧಿಕ ಹಳೆಯ ಮನೆ ಹಾಗೂ ಒಂದೆರಡು ಪಾಲಿಕೆಯ ಹಳೆಯ ಕಟ್ಟಡ ನೆಲಸಮ ಮಾಡಿದೆ. ಇನ್ನು ಹಲವು ಮನೆ ಮಾಲೀಕರಿಗೆ ನೋಟಿಸ್ ನೀಡಿದೆ. ಕಳೆದ ವರ್ಷ ಮಳೆಗಾಲದಲ್ಲಿ ಮಳೆಯಿಂದ ಸಾವಿರಾರು ಕಟ್ಟಡಗಳು ಧರೆಗುರುಳಿವೆ. ಅದರಲ್ಲಿ 1748 ಸಿ ಕೆಟಗೆರಿ, 456 ಬಿ ಕೆಟಗೆರಿ ಹಾಗೂ 8 ಎ ಕೆಟಗೆರಿ ಕಟ್ಟಡಗಳು ಮಳೆಗೆ ಹಾನಿಯಾಗಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ. ಈ ವರ್ಷವೂ ಹಲವು ಕಟ್ಟಡಗಳಿಗೆ ಪಾಲಿಕೆ ನೋಟಿಸ್ ನೀಡಿದ್ದಲ್ಲದೆ ಮರು ಸರ್ವೇ ಕೈಗೊಂಡಿದೆ.
ಮಹಾನಗರ ಪಾಲಿಕೆ ಅಧಿಕಾರಿಗಳು ಕಾಟಾಚಾರಕ್ಕೆ ಎಂಬಂತೆ ಸರ್ವೇ ನಡೆಸಿ ನೋಟಿಸ್ ನೀಡುತ್ತಾರೆ. ಆದರೆ ಮನೆಗಳ ತೆರವು ಕಾರ್ಯಾಚರಣೆ ಮಾಡುವದಿಲ್ಲ. ಪಾಲಿಕೆ ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗದೇ ಶಿಥಿಲ ಹಾಗೂ ಹಳೆಯ ಕಟ್ಟಡ ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.