ಹುಬ್ಬಳಿ, ಧಾರವಾಡ, ಕೊಪ್ಪಳ, ಕಲಬುರಗಿ, ಗದಗ: ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಪಡಿಸಿದ ಹಿನ್ನೆಲೆ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ.
ಹುಬ್ಬಳ್ಳಿಯ ದುರ್ಗದ ಬೈಲ್ನಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು, ಮುಖಂಡರು ಸಿಹಿ ಹಂಚಿದರು. ಐತಿಹಾಸಿಕ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. 70 ವರ್ಷದ ಆತಂಕಕ್ಕೆ ಇದೀಗ ತೆರೆ ಎಳೆಯಲಾಗಿದೆ. ಇದರಿಂದ ಜಗತ್ತೇ ಭಾರತವನ್ನು ಕೊಂಡಾಡುವಂತಾಗಿದೆ ಎಂದರು. ಇನ್ನು ಧಾರವಾಡದಲ್ಲೂ ಸಹ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡಿ ಐತಿಹಾಸಿಕ ನಿರ್ಧಾರ ಹೊರಡಿಸಿದ್ದಕ್ಕೆ ಪಟಾಕಿ ಸಿಡಿಸಿ ಬಿಜೆಪಿ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದರು.
ಗದಗದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ನಗರದ ಹುಯಿಲಗೋಳ ನಾರಾಯಣರಾಯರ ವೃತ್ತದಲ್ಲಿ ಸೇರಿ ಅಖಂಡ ಭಾರತದ ಪರ ಜಯಘೋಷ ಕೂಗಿದರು. ಈ ವೇಳೆ ಪರಸ್ಪರ ಸಿಹಿ ಹಂಚಿದರು.
ಕೊಪ್ಪಳದಲ್ಲೂ ಸಹ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ನಗರದ ಗಡಿಯಾರ ಕಂಬ ಸರ್ಕಲ್ನಲ್ಲಿ ಸೇರಿದ ಕಾರ್ಯಕರ್ತರು, ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ 370 ನೇ ವಿಧಿ ಹಾಗೂ 35 (ಎ) ರದ್ದು ಮಾಡಿರುವುದು ಸ್ವಾಗತಾರ್ಹ ಎಂದರು.
ಇನ್ನು ಜಮ್ಮು-ಕಾಶ್ಮೀರದ ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿದ್ದ 370 ನೇ ವಿಧಿಯನ್ನು ಕೇಂದ್ರ ಸರ್ಕಾರ ತೆಗೆದು ಹಾಕುವ ಮೂಲಕ ಐತಿಹಾಸಿಕ ನಿರ್ಣಯ ಕೈಗೊಂಡಿದೆ ಎಂದು ಕಲಬುರಗಿ ನಗರದ ಎಸ್ವಿಪಿ ವೃತ್ತದಲ್ಲಿ ಜಮಾಯಿಸಿದ್ದ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವದ ನಿರ್ಧಾರಕ್ಕೆ ಪ್ರಶಂಸೆ ವ್ಯಕ್ತಪಡಿಸಿ, ರಾಷ್ಟ್ರಪತಿ ಅವರಿಗೂ ಅಭಿನಂದನೆ ಸಲ್ಲಿಸಿದರು.