ಹುಬ್ಬಳ್ಳಿ: ಕಿಮ್ಸ್ ಒಂದಲ್ಲ ಒಂದು ಅವಾಂತರಗಳ ಮೂಲಕ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಆಡಳಿತಾಧಿಕಾರಿ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ನಡುವೆ ಫೈಟಿಂಗ್ ಶುರುವಾಗಿದ್ದು, ಈ ಖುರ್ಚಿ ಕಿತ್ತಾಟದ ಹಿಂದೆ ರಾಜಕೀಯ ನಾಯಕರ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದೆ.
ಬಾಗಲಕೋಟೆಯ ಕೃಷ್ಣಾ ಮೇಲ್ದಂಡೆ ಪುನರ್ವಸತಿ ಯೋಜನೆ ಅಧಿಕಾರಿಯಾಗಿದ್ದ ಇಸ್ಮಾಯಿಲ್ ಸಾಬ್ ಶಿರಹಟ್ಟಿ ಫೆಬ್ರವರಿ 05 ರಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಮುಖ್ಯ ಆಡಳಿತಾಧಿಕಾರಿ ಹುದ್ದೆಗೆ ವರ್ಗಾವಣೆಯಾಗಿದ್ದಾರೆ. ವರ್ಗಾವಣೆಯಾದರೂ ಸಹ ಇಂದಿಗೂ ಅವರು ಕಿಮ್ಸ್ನ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿಲ್ಲ. ಈ ಹಿಂದೆ ಇದ್ದ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ ಕಚೇರಿಗೆ ಅಗಮಿಸದಿರುವುದೇ ಇಷ್ಟೆಲ್ಲಾ ಸಮಸ್ಯೆಗೆ ಕಾರಣವಾಗಿದೆ. ಅಲ್ಲದೇ, ಬೇಕು ಎಂದೇ ವರ್ಗಾವಣೆ ಆದೇಶವನ್ನು ತಡೆಯುವ ಎಲ್ಲ ಕಾರ್ಯ ಮಾಡಲಾಗುತ್ತಿದೆ ಎನ್ನುವ ಅನುಮಾನ ಹುಟ್ಟಿಕೊಂಡಿದೆ.
ಶಿರಹಟ್ಟಿ ಜಾಗಕ್ಕೆ ಕಿಮ್ಸ್ನ ಆಡಳಿತ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾ ಗುಮಾಸ್ತೆ ಎನ್ನುವರಿಗೆ ಆಡಳಿತಾಧಿಕಾರಿ ಸ್ಥಾನ ನೀಡುವುದಕ್ಕೆ ಸದ್ದಿಲ್ಲದೆ ಕಿಮ್ಸ್ ಆಡಳಿತ ಮಂಡಳಿ ಪ್ಲಾನ್ ಮಾಡಿದೆ. ಸ್ಥಳೀಯ ರಾಜಕೀಯ ನಾಯಕರ ಒಂದು ಗುಂಪು ಸುಮಾ ಪರವಾಗಿ ಲಾಭಿ ನಡೆಸಿದ್ದಾರೆ ಎನ್ನಲಾಗಿದೆ. ಇದೆ ಕಾರಣಕ್ಕೆ ಶಿರಹಟ್ಟಿಯವರಿಗೆ ತಾಂತ್ರಿಕ ಸಮಸ್ಯೆಯಾಗಿದೆ ಅಂತಾ ಹೇಳಿ ಅಧಿಕಾರ ಸ್ವೀಕಾರ ಮಾಡಲು ಅವಕಾಶ ಮಾಡಿಕೊಟ್ಟಿಲ್ಲ. ಈ ಬಗ್ಗೆ ಕೇಳಿದ್ರೆ ಯಾವುದೇ ಪ್ರಶ್ನೆಗೂ ಉತ್ತರ ನೀಡದೆ ಅಧಿಕಾರಿ ಶಿರಹಟ್ಟಿ ಹೊರ ಮೌನ ವಹಿಸಿದ್ದಾರೆ.