ಹುಬ್ಬಳ್ಳಿ: ನಗರದಲ್ಲಿ ವಾಹನ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ರಸ್ತೆಗಳ ದುರಸ್ತಿ ಮಾಡಬೇಕು ಎಂದು ಆಟೋರಿಕ್ಷಾ ಮಾಲೀಕ ಹಾಗೂ ಚಾಲಕರ ಸಂಘಟನೆಯ ಕಾರ್ಯಕರ್ತರು 'ಅನಾಥ ರಸ್ತೆ' ಎಂಬ ನಾಮ ಫಲಕಕ್ಕೆ ಪೂಜೆ ಮಾಡಿ ಪ್ರತಿಭಟನೆ ಮಾಡಿದರು.
ಇತ್ತೀಚೆಗೆ ಸುರಿದ ಮಳೆಯಿಂದ ನಗರದ ಬಹುತೇಕ ರಸ್ತೆಗಳು ಹಾಳಾಗಿದ್ದು, ರಸ್ತೆಯ ಮಧ್ಯೆದಲ್ಲಿ ಆಳವಾದ ಗುಂಡಿಗಳು ನಿರ್ಮಾಣವಾಗಿವೆ. ಇಲ್ಲಿನ ನಿರಂಜನ್ ರಸ್ತೆ, ಚೆನ್ನಮ್ಮ ವೃತ್ತದಲ್ಲಿರುವ ಗುಂಡಿಗಳ ನಡುವೆ ವಾಹನ ಸವಾರರು ಎದ್ದು ಬಿದ್ದು ಸಂಚರಿಸುತ್ತಿದ್ದಾರೆ. ಇದೇ ರಸ್ತೆಯಲ್ಲಿ ಖುದ್ದು ಅಧಿಕಾರಿಗಳು, ಜನ ಪ್ರತಿನಿಧಿಗಳೇ ಓಡಾಟ ನಡೆಸುತ್ತಾರೆ. ಆದರೆ, ಗುಂಡಿಗಳನ್ನ ಮುಚ್ಚುವ ಕಾರ್ಯ ಮಾತ್ರ ನಡೆದಿಲ್ಲ, ಪಾಲಿಕೆ ಈ ಬಗ್ಗೆ ಕ್ಯಾರೇ ಅನ್ನುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮಳೆಯಿಂದ ಕೆಸರು ಗದ್ದೆಯಂತೆ ಆಗಿದ್ದ ರಸ್ತೆಗಳೀಗ ಧೂಳುಮಯವಾಗಿವೆ. ಕೂಡಲೇ ಅಧಿಕಾರಿಗಳು, ಜನಪ್ರತಿನಿಧಿಗಳು ಜನಗಳ ಕಷ್ಟವನ್ನು ಅರ್ಥ ಮಾಡಿಕೊಂಡು ಉತ್ತಮ ರಸ್ತೆಗಳ ನಿರ್ಮಾಣ ಮಾಡಿ ಜನಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.