ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಜಾರಿಗೊಳಿಸಿದ ಕರ್ಫ್ಯೂ ನಿಯಮ ಉಲ್ಲಂಘನೆ ಮಾಡಿದ ಐವತ್ತಕ್ಕೂ ಹೆಚ್ಚು ಆಟೋಗಳನ್ನು ಹು -ಧಾ ಮಹಾನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ವಶಕ್ಕೆ ಪಡೆದ ಬೆನ್ನಲ್ಲೇ ಹು-ಧಾ ಮಹಾನಗರ ಆಟೋ ಚಾಲಕರ ಹಾಗೂ ಮಾಲೀಕರು ಶಾಸಕ ಅರವಿಂದ ಬೆಲ್ಲದ ಅವರ ಮನೆಗೆ ಭೇಟಿ ನೀಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ನಗರದ ಅಕ್ಷಯ ಪಾರ್ಕ್ನಲ್ಲಿರುವ ಶಾಸಕ ಅರವಿಂದ ಬೆಲ್ಲದ ಅವರ ಮನೆಗೆ ಭೇಟಿ ನೀಡಿದ ಆಟೋ ಚಾಲಕರು, ನಮಗೆ ಆಟೋ ಬಿಟ್ಟು ಬೇರೆ ವಾಹನಗಳಿಲ್ಲ. ಅಲ್ಲದೇ ನಾವು ಆಸ್ಪತ್ರೆಗೆ ಹೋಗಬೇಕಾದರೂ ಅಥವಾ ತರಕಾರಿ, ಅಗತ್ಯ ವಸ್ತುಗಳ ಖರೀದಿ ಮಾಡಬೇಕಿದ್ದರೂ ಕೂಡ ಆಟೋ ತೆಗೆದುಕೊಂಡು ಹೋಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ನಮ್ಮ ಆಟೋಗಳನ್ನು ಸೀಜ್ ಮಾಡುತ್ತಿದ್ದಾರೆ ಎಂದು ಶಾಸಕರ ಮುಂದೆ ಅಸಮಾಧಾನ ಹೊರಹಾಕಿದ್ದಾರೆ.
ನಾವೆಲ್ಲರೂ ದಿನಕ್ಕೆ ಆಟೋ ನಂಬಿಕೊಂಡು ನೂರು ಇನ್ನೂರು ರೂಪಾಯಿ ದುಡಿಯುವವರು ನಮಗೆ ಈ ರೀತಿ ಮಾಡಿದರೇ ನಮ್ಮ ಜೀವನ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದರು. ಬಳಿಕ ಆಟೋ ಚಾಲಕರ ಹಾಗೂ ಮಾಲೀಕರ ಮನವಿಯನ್ನು ಸ್ವೀಕರಿಸಿದ ಶಾಸಕರು ಈ ಬಗ್ಗೆ ವಿಚಾರಿಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದರು.