ಹುಬ್ಬಳ್ಳಿ : ತಾಲೂಕಿನ ಅದರಗುಂಚಿ ಗ್ರಾಮದ ವಿರೂಪಾಕ್ಷಗೌಡ ಪಾಟೀಲ ಎಂಬುವರು 75 ವರ್ಷ ವಯಸ್ಸದ್ರೂ ಕೂಡ 18 ವಯಸ್ಸಿನ ಯುವಕರಂತೆ ರನ್ನಿಂಗ್ನಲ್ಲಿ ಭಾಗವಹಿಸುವುದರ ಮೂಲಕ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಕ್ರೀಡೆಗೆ ಒತ್ತು ಕೊಟ್ಟಿರುವ ನೀಡಿರುವ ವಿರೂಪಾಕ್ಷಗೌಡ ಪಾಟೀಲ್ ಅವರು, ಶಾಲಾ-ಕಾಲೇಜು ಸಮಯದಲ್ಲಿ ನೂರು ಮೀಟರ್ನಿಂದ ಹಿಡಿದು 5 ಕಿಲೋ ಮೀಟರ್ ಓಟದಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳ ಬಾಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ವಯಸ್ಸಾಯಿತೆಂದು ಮನೆಯಲ್ಲಿ ಕೂರದೇ ಫ್ರಾನ್ಸ್ ದೇಶದಲ್ಲಿ ನಡೆದ ಹಿರಿಯರ ಕ್ರೀಡಾ ಕೂಟದಲ್ಲಿ ಭಾಗವಹಿಸಿ 5 ಕಿ.ಮೀ ನಡಿಗೆ ಮತ್ತು 1,500 ಮೀಟರ್ ಓಟದ ಸ್ಪರ್ಧೆಯಲ್ಲಿ 13ನೇ ರ್ಯಾಂಕ್ ಪಡೆದಿದ್ದಾರೆ. ಉಡುಪಿಯಲ್ಲಿ ನಡೆದ ರಾಜ್ಯಮಟ್ಟದ ಹಿರಿಯ ನಾಗರಿಕರ ಓಟದ ಸ್ಪರ್ಧೆಯಲ್ಲಿ ಸ್ಪರ್ಧಿಸಿ 5 ಕಿ.ಮೀ. ಓಟದಲ್ಲಿ ಪ್ರಥಮ, 5 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಪ್ರಥಮ, ರಾಷ್ಟ್ರೀಯ ಮಟ್ಟದಲ್ಲಿ ಸಹ ದ್ವಿತೀಯ ಸ್ಥಾನ ಪಡೆದು ಕರ್ನಾಟಕ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಾನು ಮುಂಜಾನೆ ಎರಡು ಗಂಟೆ ಕಾಲ ವ್ಯಾಯಾಮ, ಜಾಗಿಂಗ್ ಮಾಡುತ್ತೇನೆ. ಈಗಿನ ಯುವಕರು ಡಿಜಿಟಲ್ ಉಪಕರಣಗಳಿಗೆ ದಾಸರಾಗುವುದನ್ನು ಬಿಟ್ಟು, ಮೈದಾನಕ್ಕಿಳಿಯಬೇಕು. ಆತ್ಮಬಲ ಬೆಳೆಸಿಕೊಂಡು ಛಲದಿಂದ ಮುಂದೆ ಸಾಗಿದ್ರೆ, ಎಲ್ಲರೂ ಸಾಧನೆ ಮಾಡಬಹುದು. ಕೃಷಿ, ಕ್ರೀಡೆ, ರಾಜಕೀಯ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಯುವಕರಿಗೆ ಸ್ಫೂರ್ತಿದಾಯಕವಾಗಲಿದೆ ಎಂದರು. 75ರ ವಯಸ್ಸಿನಲ್ಲೂ ಕೂಡ ಯುವಕರಂತೆ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ಮಾದರಿಯಾಗಿದ್ದಾರೆ.