ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯಿದೆ ಹಿನ್ನಲೆ ಹುಬ್ಬಳ್ಳಿ ಸಮಾವೇಶಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿದ್ದು, ಸಮಾವೇಶ ಹಾಗೂ ಪ್ರಚಾರ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಹು-ಧಾ ಮಹಾನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಸಿಎಎ ಕಾಯ್ದೆ ಅಲ್ಪಸಂಖ್ಯಾತ ಸಮುದಾಯವನ್ನು ಹೊರಗಿಟ್ಟು, ಸಂವಿಧಾನದ ಮೂಲ ಆಶಯಗಳನ್ನು ಧಿಕ್ಕರಿಸಿ ರೂಪಿಸಲಾಗಿದ್ದು, ದೇಶದಲ್ಲಿ ಕೋಮುವಾದ ಸೃಷ್ಟಿಸುವ ಇಂತಹ ಸಮಾವೇಶ ಹಾಗೂ ಪ್ರಚಾರ ಕಾರ್ಯಕ್ಕೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಆಗ್ರಹಿಸಿದರು. ಸಾರ್ವಜನಿಕ ಶಾಂತಿ, ಸುರಕ್ಷತೆ ಹಾಗೂ ಸಂಚಾರ ತೊಂದರೆ ಇರುವ ಕಾರಣ ಪೊಲೀಸ್ ಇಲಾಖೆ ಗಮನದಲ್ಲಿಟ್ಟುಕೊಂಡು ಪ್ರಚಾರ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಬೇಕು ಎಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಿದ್ದುತೇಜಿ, ಮಹೇಶ ಪತ್ತಾರ, ಅಮೃತ ಇಜಾರೆ, ಬಿ.ಎ.ಮುಧೋಳ, ದೇವಾನಂದ ಜಾಪೂರ, ಅಶೋಕ, ಎನ್.ಎ.ಖಾಜಿ ಸೇರಿದಂತೆ ಇತರರು ಇದ್ದರು.