ಹುಬ್ಬಳ್ಳಿ: ಮೃತ ಪ್ರಾಣಿಗಳನ್ನು ದಹಿಸುವುದಕ್ಕಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕ ವಿದ್ಯುತ್ ಚಿತಾಗಾರ ನಿರ್ಮಿಸಲು ಯೋಜನೆ ರೂಪಿಸಿದೆ. ಮೃತ ಪ್ರಾಣಿಗಳ ದೇಹವನ್ನು ದಹಿಸಲು ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿ ಹಾಗೂ ಧಾರವಾಡದ ಹೊಸಯಲ್ಲಾಪುರ ಬಳಿ ಇರುವ ತ್ಯಾಜ್ಯ ಸಂಗ್ರಹ ಘಟಕಗಳಲ್ಲಿ ವಿದ್ಯುತ್ ಚಿತಾಗಾರ ನಿರ್ಮಿಸಲಾಗುತ್ತಿದೆ. ಈ ಘಟಕಗಳಿಗೆ ತಲಾ 5 ಲಕ್ಷ ರೂ. ವೆಚ್ಚವಾಗುತ್ತಿದೆ.
ವಿಸ್ತೃತ ಯೋಜನಾ ವರದಿಯನ್ನು ಪಾಲಿಕೆಯ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದವರು ಸಿದ್ಧಪಡಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ವಿದ್ಯುತ್ ಚಿತಾಗಾರ ಉಪಕರಣ ಖರೀದಿಗೆ ಟೆಂಡರ್ ಕರೆಯಲಾಗುತ್ತದೆ. ಪಾಲಿಕೆ ಇಲೆಕ್ಟ್ರಿಕ್ ಇಂಜಿನಿಯರಿಂಗ್ ವಿಭಾಗದ ಸಿಬ್ಬಂದಿಯೇ ವಿದ್ಯುತ್ ಚಿತಾಗಾರವನ್ನು ನಿರ್ವಹಿಸಲಿದ್ದಾರೆ.
ಅವಳಿನಗರದಲ್ಲಿ ನಿತ್ಯ ನಾಯಿ, ಹಂದಿ, ಬಿಡಾಡಿ ದನ ಹೀಗೆ ಹಲವಾರು ಪ್ರಾಣಿಗಳು ರಸ್ತೆಯಲ್ಲಿ ಸಾಯುತ್ತಿರುತ್ತವೆ. ನಾಗರಿಕರು ನೀಡುವ ದೂರುಗಳನ್ನು ಆಧರಿಸಿ ಸದ್ಯ ಹುಬ್ಬಳ್ಳಿ-ಧಾರವಾಡದಲ್ಲಿರುವ 2 ಪ್ರತ್ಯೇಕ ಕ್ಯಾಟ್ ವೆಹಿಕಲ್‌ಗಳಲ್ಲಿ ಮೃತ ಪ್ರಾಣಿಗಳನ್ನು ತೆಗೆದುಕೊಂಡು ಹೋಗಿ, ಅವಳಿನಗರದ ಕಾರವಾರ ರಸ್ತೆ ಹಾಗೂ ಹೊಸ ಯಲ್ಲಾಪುರದಲ್ಲಿರುವ ತ್ಯಾಜ್ಯ ಸಂಗ್ರಹ ಘಟಕದಲ್ಲಿ ಪ್ರಾಣಿಗಳನ್ನು ಹೂಳಲಾಗುತ್ತದೆ. ನಿತ್ಯ 200 ರಿಂದ 250 ಕೆಜಿ ತೂಕದವರೆಗೆ ಮೃತ ಪ್ರಾಣಿಗಳನ್ನು ದಹಿಸುವ ಸಾಮರ್ಥ್ಯ ಹೊಂದಿರುವ ವಿದ್ಯುತ್ ಚಿತಾಗಾರ ನಿರ್ಮಿಸಲು ಮಹಾನಗರ ಪಾಲಿಕೆ ಯೋಜನೆ ರೂಪಿಸಿದೆ.
ಇದನ್ನೂ ಓದಿ: ಯುವತಿ ಕಂಠಸಿರಿಗೆ ಮರುಳಾದ ಉಪನ್ಯಾಸಕ ಹನಿಟ್ರ್ಯಾಪ್‌ನಲ್ಲಿ ಬಂಧಿ: ಹಾಡುಗಾರ್ತಿ & ಟೀಂ ಜೈಲು ಸೇರಿದ್ಹೇಗೆ ಗೊತ್ತೇ?
ಹೆಚ್ಚು ವಿದ್ಯುತ್ ಉಷ್ಣ ನೀಡಿ ಮೃತ ಪ್ರಾಣಿಗಳನ್ನು ದಹಿಸುವುದಕ್ಕಾಗಿ ಅವಳಿನಗರದ ತ್ಯಾಜ್ಯ ಸಂಗ್ರಹ ಘಟಕದಲ್ಲಿ ಚಿತಾಗಾರ ನಿರ್ಮಿಸಲಾಗುತ್ತಿದೆ. ಬಿಬಿಎಂಪಿಯಲ್ಲಿ ಮೃತ ಪ್ರಾಣಿಗಳ ದಹಿಸುವ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ಅದೇ ಮಾದರಿಯಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿಯೂ ಪ್ರಾಣಿಗಳ ಚಿತಾಗಾರ ನಿರ್ಮಿಸುವುದು ಸಾರ್ವಜನಿಕರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.