ಹುಬ್ಬಳ್ಳಿ (ಧಾರವಾಡ): ನಾನು ಯಾವುದೇ ಕೋಮು ಗಲಭೆಗೆ ಪ್ರಚೋದನೆ ನೀಡುವ ಸಲುವಾಗಿ ಪೊಲೀಸ್ ವಾಹನದ ಮೇಲೆ ಹತ್ತಿಲ್ಲ. ಗಲಾಟೆಯನ್ನು ಹತ್ತಿಕ್ಕುವ ಸಲುವಾಗಿ ನಾನು ವಾಹನದ ಮೇಲೆ ಹತ್ತಿದ್ದೇನೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಲ್ತಾಫ್ ಹಳ್ಳೂರ ಸ್ಪಷ್ಟಪಡಿಸಿದರು.
ಗಲಾಟೆಯ ವಿಡಿಯೋ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ಪ್ರಚೋದನೆ ಮಾಡುತ್ತಿರಲಿಲ್ಲ. ನಮ್ಮ ಜನರನ್ನು ಸಮಾಧಾನ ಮಾಡುತ್ತಿದ್ದೆ. ಎತ್ತರದಲ್ಲಿ ನಿಂತು ಮಾತನಾಡಿದ್ರೆ ಜನರಿಗೆ ನನ್ನ ಧ್ವನಿ ಕೇಳುತ್ತದೆ ಎನ್ನುವ ಕಾರಣಕ್ಕೆ ಪೊಲೀಸ್ ವಾಹನ ಏರಿದ್ದೆ ಎಂದು ತಿಳಿಸಿದರು.
ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಪ್ರಕರಣ..104 ಮಂದಿ ಆರೋಪಿಗಳ ಬಂಧನ ಕುರಿತು ಪೊಲೀಸ್ ಕಮಿಷನರ್ ಮಾಹಿತಿ
ಗಲಭೆಯಲ್ಲಿ ಪಾಲ್ಗೊಂಡಿದ್ದ ಹಲವರು ಸ್ಥಳೀಯರಲ್ಲ. ಕಪ್ಪು ಬಟ್ಟೆ ಕಟ್ಟಿಕೊಂಡು ಕಲ್ಲು ಎಸೆದವರು ಸ್ಥಳೀಯರಲ್ಲ. ಬೇರೆ ಬೇರೆ ಸಂಘಟನೆಯವರು ಕಲ್ಲು ತೂರಾಟ ನಡೆಸಿದ್ದಾರೆ. ನನಗೂ ಕೂಡ ಗಾಯಗಳಾಗಿವೆ ಎಂದರು.
ನಾನು ಯಾವುದೇ ಕಾರಣಕ್ಕೂ ಕೋಮುಗಲಭೆ ಸೃಷ್ಟಿಸುವ ಹಾಗೂ ದೇಶ ದ್ರೋಹದ ಕೆಲಸವನ್ನು ಮಾಡುವುದಿಲ್ಲ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಲಿ ಎಂದರು. ಇನ್ನೂ ಗಲಾಟೆ ಮಾಡಿದವರ ಬಗ್ಗೆ ನನಗೆ ಗೊತ್ತಿರುವಷ್ಟು ಮಾಹಿತಿಯನ್ನು ಪೊಲೀಸ್ ಇಲಾಖೆಗೆ ನೀಡಿದ್ದೇನೆ ಎಂದರು.