ಹುಬ್ಬಳ್ಳಿ : ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ಬೆಂಗಳೂರು ಮತ್ತಿತರ ಸ್ಥಳಗಳಿಂದ ಬರುವ ಹಾಗೂ ಹಬ್ಬ ಮುಗಿಸಿ ಹಿಂದಿರುಗುವ ಸಾರ್ವಜನಿಕರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ವಿಭಾಗದಿಂದ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗಿದೆ.
ಕೋವಿಡ್-19 ಮಾರ್ಗದರ್ಶಿ ನಿರ್ದೇಶನಗಳ ಪ್ರಕಾರ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ಸಂಸ್ಥೆಯ ಬಸ್ಸುಗಳಲ್ಲಿ ಸಂಚರಿಸಬಹುದಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ನವೆಂಬರ್ 14 ರಂದು ನರಕ ಚತುರ್ದಶಿ ಮತ್ತು ಎರಡನೇ ಶನಿವಾರ, 15ರಂದು ರವಿವಾರ ದೀಪಾವಳಿ ಅಮವಾಸ್ಯೆ ಹಾಗೂ 16ರಂದು ಸೋಮವಾರ ಬಲಿಪಾಡ್ಯಮಿ ಪ್ರಯುಕ್ತ ಹೆಚ್ಚಿನ ಜನದಟ್ಟಣೆ ನಿರೀಕ್ಷಿಸಲಾಗಿದೆ. ಈ ಅವಧಿಯಲ್ಲಿ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ವೋಲ್ವೋ, ಸ್ಲೀಪರ್ ಹಾಗೂ ರಾಜಹಂಸ ಮುಂತಾದ ಐಷಾರಾಮಿ ಬಸ್ಸುಗಳು ಮತ್ತು ವೇಗದೂತ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಾಗುತ್ತದೆ.
ಮುಂಗಡ ಬುಕ್ಕಿಂಗ್ ಹಾಗೂ ಪ್ರಯಾಣ ದರದಲ್ಲಿ ರಿಯಾಯಿತಿ
ಹಬ್ಬದ ವಿಶೇಷ ಬಸ್ಸುಗಳಿಗೆ ಆನ್ ಲೈನ್ ಮತ್ತು ಬುಕ್ಕಿಂಗ್ ಕೌಂಟರುಗಳ ಮೂಲಕ ಮುಂಚಿತವಾಗಿ ಆಸನಗಳನ್ನು ಕಾಯ್ದಿರಿಸಲು ಅವಕಾಶ ಕಲ್ಪಿಸಲಾಗಿದೆ. ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವಾಗ 4 ಅಥವಾ 4 ಕ್ಕಿಂತ ಹೆಚ್ಚಿನ ಆಸನಗಳಿಗೆ ಒಂದೇ ಟಿಕೆಟ್ ಪಡೆದುಕೊಂಡರೆ ಮೂಲ ಪ್ರಯಾಣದರದಲ್ಲಿ ಶೇ.5 ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಹೋಗುವ ಮತ್ತು ಬರುವಾಗಿನ ಪ್ರಯಾಣಕ್ಕೆ ಆಸನಗಳನ್ನು ಒಮ್ಮೆಗೇ ಕಾಯ್ದಿರಿಸಿದರೆ ಬರುವಾಗಿನ ಪ್ರಯಾಣದ ಮೂಲ ಟಿಕೆಟ್ ದರದಲ್ಲಿ ಶೇ. 10 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಸಾರ್ವಜನಿಕರು ಈ ಹೆಚ್ಚುವರಿ ಬಸ್ಸುಗಳ ಮತ್ತು ರಿಯಾಯಿತಿಗಳ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳುವಂತೆ ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮನವಿ ಮಾಡಿದ್ದಾರೆ.