ಹುಬ್ಬಳ್ಳಿ : ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಸಾಕಷ್ಟು ಪ್ರಯತ್ನಗಳನ್ನು ಮಾಡಲಾಗಿತ್ತು. ಸದ್ಯ ಬಹುದಿನಗಳ ಪ್ರಯತ್ನಕ್ಕೆ ಫಲ ದೊರೆತಂತೆ ಕಾಣುತ್ತಿದ್ದು, ಕನಸು ನನಸಾಗುವ ಕಾಲ ಸನಿಹವಾದಂತಿದೆ.
ಉ.ಕ. ಭಾಗದಲ್ಲಿ ಕೈಗಾರಿಕಾಭಿವೃದ್ಧಿ ಮಾಡುವ ಸದುದ್ದೇಶದಿಂದ ವಾಣಿಜ್ಯನಗರಿ ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ಕಳೆದ ಫೆಬ್ರವರಿ ತಿಂಗಳಲ್ಲಿ 'ಇನ್ವೆಸ್ಟ್ ಕರ್ನಾಟಕ ಸಮಾವೇಶ' ಆಯೋಜನೆ ಮಾಡಲಾಗಿತ್ತು. ಸಮಾವೇಶದ ನಂತರ ಈ ಭಾಗದ ಕೈಗಾರಿಕಾ ಸ್ಥಾಪನೆಗೆ ಶುಕ್ರದಸೆ ಪ್ರಾರಂಭವಾಗಿದೆ. ಬೃಹತ್ ಮಟ್ಟದ ಖಾಸಗಿ ಕಂಪನಿಗಳು ದೊಡ್ಡಮಟ್ಟದ ಬಂಡವಾಳ ಹೂಡಲು ಮುಂದೆ ಬಂದಿವೆ.
ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಧನಾತ್ಮಕ ಪ್ರತಿಕ್ರಿಯೆ ಬಂದಿದ್ದು, ದೇಶದ ಮೂಲೆ ಮೂಲೆಗಳಿಂದ ವಿವಿಧ ಕಂಪನಿಗಳು ಧಾರವಾಡ ಜಿಲ್ಲೆಗೆ ಆಗಮಿಸುತ್ತಿವೆ. ಈ ಪೈಕಿ 'ಏಕಸ್ ಕಂಪನಿ' ಧಾರವಾಡದ ಇಟ್ಟಿಗಟ್ಟಿ ಕೈಗಾರಿಕಾ ಪ್ರದೇಶದಲ್ಲಿ ಟಿವಿ, ಫ್ರಿಡ್ಜ್ ಬಿಡಿಭಾಗಗಳನ್ನು ತಯಾರಿಸುವ ಘಟಕಗಳನ್ನ ಸ್ಥಾಪನೆ ಮಾಡಲು ಮುಂದಾಗಿದೆ.
ಪಾಸ್ಟ್ ಮೂವಿಂಗ್ ಕಂಜುಮರ್ ಗೂಡ್ಸ್(ಎಫ್.ಎಂ. ಸಿಜಿ - ವೇಗವಾಗಿ ಮಾರಾಟವಾಗುವ ಗ್ರಾಹಕರ ವಸ್ತುಗಳು)ಕ್ಲಸ್ಟರ್ ಸ್ಥಾಪನೆ ಕುರಿತು ಉಲ್ಲಾಸ ಕಾಮತ್ ನೇತೃತ್ವದಲ್ಲಿ ವರದಿಯನ್ನು ಈಗಾಗಲೇ ಸಲ್ಲಿಸಿದೆ. ಈಗ ಏಕಸ್ ಕಂಪನಿ ಕೂಡ ಗೃಹ ಬಳಕೆ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಉತ್ಪಾದಿಸುವ ಘಟಕ ಸ್ಥಾಪಿಸುವ ಕುರಿತು ಪ್ರಸ್ಥಾವನೆ ಸಲ್ಲಿಸಿದೆ.
ಇಲ್ಲಿ ನೋಡಿ-ನಕಲಿ ಫಲಾನುಭವಿಗಳ ಕೈ ಸೇರುತ್ತಿದ್ದ ನಿವೇಶನಗಳ ರಕ್ಷಣೆ: ಅಕ್ರಮ ಬಯಲಿಗೆಳೆದ 'ಪೆನ್ ಡ್ರೈವ್'!
ಇನ್ನೂ ಈ ಕುರಿತು ರಾಜ್ಯ ಸರ್ಕಾರ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಅಗತ್ಯ ಭೂಮಿ ಮಂಜೂರಾತಿ ಪಡೆದುಕೊಂಡಿದೆ. ಧಾರವಾಡ ಜಿಲ್ಲೆಯ ಇಟಿಗಟ್ಟಿಯ ಬಳಿಯಲ್ಲಿ 400 ಎಕರೆ ಭೂಮಿಯನ್ನು ಏಕಸ್ ಕಂಪನಿಗೆ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ಮೊದಲ ಹಂತದ ಕಾರ್ಯ ಚಟುವಟಿಕೆಗಳು ಪ್ರಾರಂಭಗೊಂಡಿವೆ.
ಈಗಾಗಲೇ ಬೆಳಗಾವಿ ಬಳಿ ಏರೋಸ್ಪೇಸ್ ಎಸ್ಇಜೆಡ್ ಘಟಕ ಸ್ಥಾಪನೆ ಮಾಡಿದ್ದು, ಈಗ ಧಾರವಾಡದಲ್ಲಿ ಸುಮಾರು 3,500 ಕೋಟಿ ಬಂಡವಾಳ ಹೂಡಲು ಮುಂದಾಗಿದೆ. ಅಲ್ಲದೇ 30 ಸಾವಿರ ಉದ್ಯೋಗ ಸೃಷ್ಟಿಯ ಭರವಸೆ ನೀಡಿದೆ. ಫ್ರಿಡ್ಜ್, ವಾಸಿಂಗ್ ಮಷಿನ್, ಎಸಿ, ಹೀಟರ್, ಟಿವಿ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳು ಇನ್ನೂ ಧಾರವಾಡದಲ್ಲಿ ಉತ್ಪಾದನೆಗೊಳ್ಳುತ್ತಿರುವುದು ವಿಶೇಷವಾಗಿದೆ.
ಇನ್ನೂ ಮಮ್ಮಿಗಟ್ಟಿ ಬಳಿ ಕೂಡ ಎಫ್ಎಂಸಿಜಿ ಘಟಕ ಸ್ಥಾಪನೆಗೆ ಸ್ಥಳ ವೀಕ್ಷಣೆ ಕಾರ್ಯ ನಡೆದಿದೆ. ಕೆಲವು ದಿನಗಳಲ್ಲಿ ಅದು ಕೂಡ ಕಾರ್ಯಾರಂಭ ಮಾಡಲಿದ್ದು, ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ಈ ಯುವಕರಿಗೆ ಉದ್ಯೋಗಗಳು ಸಿಗುವ ಆಶಾಭಾವನೆ ಹೆಚ್ಚಿಸಿದೆ.