ಹುಬ್ಬಳ್ಳಿ: ಕೋವಿಡ್ ಹೊಡೆತಕ್ಕೆ ಬಂದ್ ಆಗಿದ್ದ ಶಾಲಾ ಕಾಲೇಜುಗಳು ಈಗ ಆರಂಭವಾಗುತ್ತಿದ್ದು, ಶಾಲಾ ಕಾಲೇಜುಗಳಿಗೆ ಪ್ರವೇಶ ಶುಲ್ಕ ವಿಚಾರ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಪಾಲಕರ ಜೇಬಿಗೆ ವಾಯುವ್ಯ ಸಾರಿಗೆ ಸಂಸ್ಥೆ ಮತ್ತೆ ಕತ್ತರಿ ಹಾಕಿರೋದು ಪಾಲಕರ ಕೆಂಗಣ್ಣಿಗೆ ಗುರಿಯಾಗಿದೆ.
ಜನವರಿಯಿಂದ ಶಾಲಾ ಕಾಲೇಜುಗಳು ಆರಂಭವಾಗಿದೆ. ಆದರೆ, ವಾಯುವ್ಯ ಸಾರಿಗೆಯವರು ಮಾತ್ರ ನವೆಂಬರ್ 2020ರಿಂದಲೆ ಬಸ್ ಪಾಸ್ ಹಣವನ್ನು ಸಂಗ್ರಹ ಮಾಡಿದ್ದಾರೆ. ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಪ್ರಯಾಣ ಮಾಡದಿದ್ದರೂ ಬಸ್ ಪಾಸ್ ಮಾತ್ರ ನವೆಂಬರ್ ತಿಂಗಳಿಂದ ಎಂದು ನಮೂದು ಮಾಡಿ ಹೆಚ್ಚುವರಿ ಹಣ ವಸೂಲಿ ಮಾಡಿರುವುದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.
ವಾಯುವ್ಯ ಸಾರಿಗೆ ಸಂಸ್ಥೆ ರಿಯಾಯಿತಿ ಬಸ್ ಪಾಸ್ ಸೌಲಭ್ಯಕ್ಕೆ ಜನವರಿಯಿಂದ ಅರ್ಜಿ ಆಹ್ವಾನಿಸಿದೆ. ನವೆಂಬರ್ 2020 ರಿಂದ ಅಗಸ್ಟ್ 2021 ರವರೆಗೆ ಮಾನ್ಯತೆ ಅವಧಿ ನಿಗದಿ ಪಡಿಸಿ ದರ ಆಕರಣೆ ಮಾಡಲಾಗುತ್ತಿದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 750, ಪಿಯುಸಿ, ಪದವಿ , ಡಿಪ್ಲೊಮಾ ವಿದ್ಯಾರ್ಥಿಗಳಿಗೆ 1,050 , ಐಟಿಐನವರಿಗೆ 1,310 ಹಾಗೂ ವೃತ್ತಿಪರ ಕೋರ್ಸ್ ಅವರಿಗೆ 1,550 ರೂ. ವಸೂಲಿ ಮಾಡಲಾಗುತ್ತಿದೆ.
ಕಳೆದ ವರ್ಷ 4,96,865 ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸಲಾಗಿತ್ತು, ಈ ವರ್ಷ ಇದುವರೆಗೆ 1,12,283 ವಿದ್ಯಾರ್ಥಿಗಳಿಗೆ ಪಾಸ್ ವಿತರಿಸಲಾಗಿದೆ. ಕೇಂದ್ರ ಕಚೇರಿಯ ಸುತ್ತೋಲೆ ಹಿನ್ನೆಲೆ ದರ ಆಕರಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಮೊದಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಜರ್ಜರಿತರಾಗಿರುವ ಪಾಲಕರು, ಮಕ್ಕಳ ಶಾಲಾ ಪ್ರವೇಶ ಶುಲ್ಕ ತುಂಬಲು ಪರದಾಡುತ್ತಿರುವ ಸಂದರ್ಭದಲ್ಲಿ,ಈಗ ವಾಯುವ್ಯ ಸಾರಿಗೆಯವರು ಮಾಡಿರುವ ಎಡವಟ್ಟಿನಿಂದ ಪಾಲಕರಿಗೆ ಮತ್ತಷ್ಟು ಆರ್ಥಿಕ ಹೊರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.