ಧಾರವಾಡ: ಡಿ. 22 ರಂದು ಧಾರವಾಡ, ಅಳ್ನಾವರ ಮತ್ತು ಕಲಘಟಗಿ ತಾಲೂಕುಗಳಲ್ಲಿ ನಡೆಯಲಿರುವ ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆಗಾಗಿ ಒಟ್ಟು 421 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 271 ಸಾಮಾನ್ಯ, 85 ಸೂಕ್ಷ್ಮ ಮತ್ತು 65 ಅತಿ ಸೂಕ್ಷ್ಮ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಧಾರವಾಡ ತಾಲೂಕಿನ 34 ಗ್ರಾಮ ಪಂಚಾಯತ್ಗಳಲ್ಲಿ ಚುನಾವಣೆ ನಡೆಸಲು 182 ಸಾಮಾನ್ಯ, 31 ಸೂಕ್ಷ್ಮ ಹಾಗೂ 30 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಮತ್ತು ಕೊಟಬಾಗಿ ಗ್ರಾಮ ಪಂಚಾಯತ್ನ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದರಿಂದ ಕೊಟಬಾಗಿ ವಾರ್ಡ್ವೊಂದರ ಮತಗಟ್ಟೆ-127, 127 ಎ ಮತ್ತು ಕೊಟಬಾಗಿ ವಾರ್ಡ್ ನಂ.2 ರ ಮತಗಟ್ಟೆ-128, 128 ಎ ಮತ್ತು ಜೀರಿಗವಾಡದ ಮತಗಟ್ಟೆ-132 ರಲ್ಲಿ ಮತದಾನ ಪ್ರಕ್ರಿಯೆಗಳು ನಡೆಯುವುದಿಲ್ಲ. ಧಾರವಾಡ ತಾಲೂಕಿನಲ್ಲಿ ಒಟ್ಟು 238 ಮತಗಟ್ಟೆಗಳನ್ನು ಸಿದ್ಧಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅಳ್ನಾವರ ತಾಲೂಕಿನ ನಾಲ್ಕು ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ಜರುಗಿಸಲು 5 ಸಾಮಾನ್ಯ, 10 ಸೂಕ್ಷ್ಮ ಮತ್ತು 6 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಒಟ್ಟು ಅಳ್ನಾವರ ತಾಲೂಕಿನಲ್ಲಿ 21 ಮತಗಟ್ಟೆಗಳನ್ನು ಮತದಾನ ಕಾರ್ಯಕ್ಕಾಗಿ ಸಿದ್ಧಗೊಳಿಸಲಾಗಿದೆ.
ಇನ್ನೂ ಕಲಘಟಗಿ ತಾಲೂಕಿನ 27 ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ನಡೆಸಲು 84 ಸಾಮಾನ್ಯ, 44 ಸೂಕ್ಷ್ಮ ಮತ್ತು 29 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಸೂರಶೆಟ್ಟಿಕೊಪ್ಪ ಗ್ರಾಮ ಪಂಚಾಯಿತಿಯ ದ್ಯಾಮಾಪೂರ ಕ್ಷೇತ್ರದ ಮತಗಟ್ಟೆ - 70, ಗುಡ್ಡದಹುಲಿಕಟ್ಟಿ ಗ್ರಾಮ ಪಂಚಾಯಿತಿಯ ಸೋಲಾರಗೊಪ್ಪ ಕ್ಷೇತ್ರದ ಮತಗಟ್ಟೆ - 73, ಸೂಳಿಕಟ್ಟಿ ಗ್ರಾಮ ಪಂಚಾಯಿತಿಯ ಕಂದ್ಲಿ ಕ್ಷೇತ್ರದ ಮತಗಟ್ಟೆ-117 ಮತ್ತು ತಂಬೂರು ಗ್ರಾಮ ಪಂಚಾಯಿತಿಯ ಹುಲಗಿನಕೊಪ್ಪ ಕ್ಷೇತ್ರದ ಮತಗಟ್ಟೆ-132 ರಲ್ಲಿ ಮತದಾನ ಪ್ರಕ್ರಿಯೆಗಳು ನಡೆಯುವುದಿಲ್ಲ. ಕಲಘಟಗಿ ತಾಲೂಕಿನಲ್ಲಿ ಒಟ್ಟು 157 ಮತಗಟ್ಟೆಗಳನ್ನು ಮತದಾನ ಕಾರ್ಯಕ್ಕಾಗಿ ಸಿದ್ಧಗೊಳಿಸಲಾಗಿದೆ.