ಧಾರವಾಡ: ಜಿಲ್ಲೆಯ ಗ್ರಾಮವೊಂದರಲ್ಲಿ ಎರಡೇ ವಾರದಲ್ಲಿ ಸುಮಾರು 13 ಜನ ಮೃತಪಟ್ಟ ಹಿನ್ನೆಲೆ ಗ್ರಾಮಸ್ಥರು ರಕ್ಷಣೆ ಕೋರಿ ದೇವರ ಮೊರೆ ಹೋಗಿದ್ದಾರೆ.
ಓದಿ: ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ 10 ಕ್ರಯೋಜೆನಿಕ್ ಆಕ್ಸಿಜನ್ ಟ್ಯಾಂಕರ್ ನೀಡಲು ನಿರ್ಧಾರ: ಸಚಿವ ನಿರಾಣಿ
ತಾಲೂಕಿನ ಮನಸೂರ ಗ್ರಾಮದಲ್ಲಿ 13 ಜನ ಎರಡು ವಾರದಲ್ಲಿ ನಿಧನ ಹೊಂದಿದ್ದಾರೆ. ಗ್ರಾಮದಲ್ಲಿ ಸಾಲು ಸಾಲಾಗಿ ಜನರು ವಿಧಿವಶರಾಗಿದ್ದಾರೆ. ಅದರಲ್ಲಿ ಇಬ್ಬರು ಮಾತ್ರವೇ ಕೊರೊನಾದಿಂದ ಸಾವನ್ನಪ್ಪಿದ್ದು, ಉಳಿದ 11 ಜನ ನಾನಾ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ.
ಎರಡೇ ವಾರದಲ್ಲಿ ಗ್ರಾಮದಲ್ಲಿ ಸರಣಿ ಸಾವುಗಳಿಂದ ಗ್ರಾಮದ ಜನರಲ್ಲಿ ಸಹಜವಾಗಿ ಆತಂಕ ಮನೆ ಮಾಡಿದೆ. ಮನಸೂರ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಸಾಲು ಸಾಲು ಸಾವುಗಳಾಗಿವೆ. ಇದರಿಂದ ಗ್ರಾಮಸ್ಥರು ಭಯದಿಂದ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ.
ಇದೀಗ ಗ್ರಾಪಂ ಸದಸ್ಯರು ಹಾಗೂ ಗ್ರಾಮದ ಪ್ರಮುಖರು ಗ್ರಾಮದ ರಕ್ಷಣೆಗಾಗಿ ದೇವರ ಮೊರೆ ಹೋಗಿದ್ದಾರೆ. ತಮ್ಮ ಗ್ರಾಮವನ್ನು ಉಳಿಸು ಎಂದು ಗ್ರಾಮದೇವಿಯಲ್ಲಿ ಬೇಡಿಕೊಂಡಿದ್ದಾರೆ. ಕಳೆದ 7 ವರ್ಷಗಳಿಂದ ಈ ಗ್ರಾಮದೊಳಗಿನ ಡೋಣಿ ಕರಿಯಮ್ಮ ದೇವಸ್ಥಾನ ಕಟ್ಟಿಸದೇ ಅರ್ಧಕ್ಕೆ ಬಿಡಲಾಗಿತ್ತು. ಅದಕ್ಕೆ ಈ ರೀತಿ ಕಷ್ಟ ಬಂದಿದೆ ಎಂದು ಗ್ರಾಮಸ್ಥರಲ್ಲಿ ಭಯ ಹುಟ್ಟಿದೆ ಎನ್ನಲಾಗಿದೆ.
ಹೀಗಾಗಿ ಗ್ರಾಮದ ಹೊರವಲಯದ ಹಳ್ಳದ ಕರಿಯಮ್ಮ ದೇವಸ್ಥಾನದಲ್ಲಿ ಡೋಣಿ ಕರಿಯಮ್ಮ ದೇವಸ್ಥಾನ ಕಟ್ಟಿಸುವುದಾಗಿ ಬೇಡಿಕೊಂಡು ಸಂಕಲ್ಪ ಮಾಡಿದ್ದಾರೆ. ದೇವಸ್ಥಾನದಲ್ಲಿನ ಭವಿಷ್ಯ ಹೇಳುವ ಕಲ್ಲು ಎತ್ತುವ ಮೂಲಕ ಗ್ರಾಮಕ್ಕೆ ಬಂದಿರುವ ಸಂಕಷ್ಟ ದೂರ ಮಾಡುವಂತೆ ಬೇಡಿಕೊಂಡಿದ್ದಾರೆ. ಕಳೆದ ವಾರವಷ್ಟೇ ಒಂದೇ ಓಣಿಯಲ್ಲಿ 4 ಜನ ಎರಡು ದಿನಗಳ ಅಂತರದಲ್ಲಿ ಸಾವನ್ನಪ್ಪಿದ್ದರು. ದೇವರಲ್ಲಿ ಮೊರೆ ಹೋದ ಬಳಿಕ ಡೋಣಿ ಕರಿಯಮ್ಮನ ದೇವಸ್ಥಾನ ನಿರ್ಮಾಣದ ಕಾಮಗಾರಿಯನ್ನೂ ಸಹ ಆರಂಭಿಸಲಾಗಿದೆ. ಡೋಣಿ ಕರಿಯಮ್ಮ ಮತ್ತು ಹಳ್ಳದ ಕರಿಯಮ್ಮ ದೇವಿಗಳೇ ನಮ್ಮೂರನ್ನು ಕಾಪಾಡಬೇಕು ಎಂದು ಜನ ನಂಬಿದ್ದಾರೆ.