ದಾವಣಗೆರೆ: ಜನರ ರಕ್ಷಣೆಗಾಗಿ ಕೋವಿಡ್ ವಿರುದ್ಧ ಹೋರಾಡುತ್ತಿದ್ದ ಕೊರೊನಾ ವಾರಿಯರ್ ಪೊಲೀಸ್ ಪೇದೆಯೊಬ್ಬರು ಮಗುವಿನ ಮುಖ ನೋಡುವ ಮೊದಲೇ ಮಹಾಮಾರಿಗೆ ಬಲಿಯಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಿಪಿಐ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಿಳಾ ಕಾನ್ಸ್ಟೇಬಲ್ ಚಂದ್ರಕಲಾ (31) ಕೊರೊನಾಗೆ ಬಲಿಯಾಗಿದ್ದಾರೆ. ಮಗು ಬರುವ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಚಂದ್ರಕಲಾರವರ ಸಾವಿನ ಸುದ್ದಿ ಬರಸಿಡಿಲಿನಂತೆ ಬಂದೊದಗಿದೆ.
4 ತಿಂಗಳ ಗರ್ಭಿಣಿಯಾಗಿದ್ದ ಕಾನ್ಸ್ಟೇಬಲ್ಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಎಂದು ದಾಖಲಾಗಿದ್ದ ಚಂದ್ರಕಲಾಗೆ ಹೆಚ್ಚಿನ ಚಿಕಿತ್ಸೆಗೆ ನಾರಾಯಣ ಹೃದಯಾಲಯಕ್ಕೆ ವರ್ಗಾಯಿಸಲಾಗಿತ್ತು. ಆದ್ರೇ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ.
ಚಂದ್ರಕಲಾ ಸಾವಿಗೆ ಜಿಲ್ಲಾ ಪೊಲೀಸರು ಸಂತಾಪ ಸೂಚಿಸಿದ್ದು, ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.