ದಾವಣಗೆರೆ : ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರ ಸಾವನಪ್ಪಿರುವ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತಕ್ಕನಹಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಹೊನ್ನಾಳಿ ತಾಲೂಕಿನ ಬಸವ ಪಟ್ಟಣದ ಕೋಟೆಹಾಳ್ ಗ್ರಾಮದ ಮಹೇಶಪ್ಪ, ಸಂಜು ಹಾಗೂ ಮತ್ತೊಂದು ಬೈಕ್ನಲ್ಲಿದ್ದ ದಿಡಗೂರು ಪ್ರಶಾಂತ್ ಮೃತ ದುರ್ದೈವಿಗಳು. ಬೈಕ್ನಲ್ಲಿದ್ದ ಮತ್ತೋರ್ವ ಆನಂದ್ ಎಂಬಾತನಿಗೆ ತೀವ್ರ ಗಾಯಗಳಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೇವರ ಹೊನ್ನಾಳಿ-ತಕ್ಕನಹಳ್ಳಿ ಗ್ರಾಮಗಳ ನಡುವೆ ಬಸವ ಪಟ್ಟಣ ಸವಳಂಗ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮೃತರಾದ ಪ್ರಶಾಂತ್ ಹಾಗೂ ಗಾಯಾಳು ಆನಂದ್ ತಮ್ಮೂರು ದಿಡಗೂರಿನತ್ತ ಪ್ರಯಾಣ ಬೆಳೆಸುತ್ತಿದ್ದರು.
ಈ ಸಂದರ್ಭದಲ್ಲಿ ಇನ್ನೊಂದು ಬೈಕ್ನಲ್ಲಿ ಎದುರಿಗೆ ಬಂದ ಕೋಟೆಹಾಳ್ನ ಮೃತ ಮಹೇಶಪ್ಪ ಹಾಗೂ ಸಂಜು ತಮ್ಮ ಊರಿಗೆ ಬೈಕ್ನಲ್ಲಿ ಬರುತ್ತಿದ್ದರು. ಒಂದು ಬೈಕ್ನಲ್ಲಿದ್ದವರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗ್ತಿದೆ.
ತಡರಾತ್ರಿ ಅಪಘಾತದ ಮಾಹಿತಿ ತಿಳಿದ ಹೊನ್ನಾಳಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮೈಸೂರು : ಜೆಡಿಎಸ್ ಮುಖಂಡ ಬೆಳವಾಡಿ ಶಿವಮೂರ್ತಿ ಪುತ್ರ ಆತ್ಮಹತ್ಯೆ!