ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದ ಸ್ವಾಮೀಜಿಗಳ ವಿರುದ್ಧ ಮಾಜಿ ಹರಿಹರ ಶಾಸಕ ಶಿವಶಂಕರ್ ಕಿಡಿಕಾರಿದ ಹಿನ್ನೆಲೆಯಲ್ಲಿ ಹರಿಹರ ಪೀಠದ ಧರ್ಮದರ್ಶಿ ಚಂದ್ರಶೇಖರ್ ಸ್ಪಷ್ಟನೆ ನೀಡಿದರು.
ದಾವಣಗೆರೆ ಜಿಲ್ಲೆಯ ಹರಿಹರದ ಪಂಚಮಸಾಲಿ ಪೀಠದಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ ಚಂದ್ರಶೇಖರ್, 2ಎ ಮೀಸಲಾತಿಗೆ ಹರಿಹರದ ಪೀಠ ಕೂಡಲಸಂಗಮ ಪೀಠದೊಂದಿಗೆ ಕೈಜೋಡಿಸಲಿದ್ದು, ನಮ್ಮ ಸಂಪೂರ್ಣ ಬೆಂಬಲವಿದೆ. ಅದ್ರೆ ಹರಿಹರದ ಮಾಜಿ ಶಾಸಕ ಶಿವಶಂಕರ್ ಅವರು ಹರಿಹರ ಪೀಠಾಧ್ಯಕ್ಷರಾದ ವಚನಾನಂದ ಸ್ವಾಮೀಜಿ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಿದ್ದಾರೆ. ತಾರೆಯರನ್ನು ಕರೆಯಿಸಿ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಅವರು ರಂಗೀಲಾ ಸ್ವಾಮಿಗಳೆಂದು ಹೇಳಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಹರಿಹರದಲ್ಲಿ ಪರ್ಯಾಯ ಪೀಠ ಮಾಡಿ, ನನ್ನ ಶಕ್ತಿ ಪ್ರದರ್ಶನ ಮಾಡುತ್ತೇನೆ ಅನ್ನೋ ಮಾಜಿ ಶಾಸಕರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಶಿವಶಂಕರ್ ಅವರೇ ಮೊದಲು ನೀವು ಹರಿಹರದಲ್ಲಿ ಬಂದ್ ಆಗಿರುವ ಭದ್ರಾ ಸಕ್ಕರೆ ಕಾರ್ಖಾನೆ ಶುರು ಮಾಡಿಸಿ, ಅಲ್ಲಿ ನಿಮ್ಮ ತಾಕುತ್ತು ಏನು ಅನ್ನೋದನ್ನು ತೋರಿಸಿ. ತುಮಕೂರು ಸಿದ್ಧಗಂಗೆಯ ರೀತಿಯಲ್ಲಿ ಹರಿಹರ ಪಂಚಮಸಾಲಿ ಮಠ ಬೆಳೆಯುತ್ತದೆ ಎಂದು ಮಾಜಿ ಶಾಸಕರಿಗೆ ಟಾಂಗ್ ನೀಡಿದರು.
ಯೋಗವನ್ನು ವಿಶ್ವವೇ ಒಪ್ಪಿದೆ, ಯೋಗ ಗುರುಗಳು ಪೀಠಾಧಿಪತಿಯಾಗಲು ಬೇಡ ಅನ್ನುತ್ತೀರಿ, ಅದು ನಿಮ್ಮ ವೈಯಕ್ತಿಕ ಅಭಿಪ್ರಾಯವಾಗಿದ್ದು, ಶ್ರೀಗಳ ಯೋಗ್ಯತೆ ಬಗ್ಗೆ ಮಾತನಾಡುವವರು ನಿಮ್ಮ ಯೋಗ್ಯತೆ ಏನು ಅನ್ನುವುದನ್ನು ತಿಳಿದುಕೊಳ್ಳಿ, ರಾಜಕಾರಣ ಮಾಡುವುದಕ್ಕೆ ಬೇರೆ ವೇದಿಕೆ ಇದೆ. ನಿಮ್ಮಿಂದ ಸಮಾಜಕ್ಕೆ ಅನ್ಯಾಯವಾಗುವುದು ಬೇಡ ಎಂದು ಹೆಚ್ ಶಿವಶಂಕರ್ ಹೇಳಿಕೆಗೆ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.