ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದಲ್ಲಿ ನಡೆದಂತಹ ಎರಡು ಗಂಪುಗಳ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ಹತ್ತು ಜನರನ್ನು ಬಂಧಿದ್ದಾರೆ. ವಾಟ್ಸ್ ಆ್ಯಪ್ ಸ್ಟೇಟಸ್ಗೆ ವಿವಾದಾತ್ಮಕ ಚಿತ್ರ ಹಾಕಿ ನಂತರ ಗಲಾಟೆ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಗಿರಿ ಠಾಣೆಯ ಪೊಲೀಸರು ಹತ್ತು ಜನರನ್ನು ಬಂಧಿಸಿದ್ದು, ಗ್ರಾಮದಲ್ಲಿ ಪರಿಸ್ಥಿತಿ ಶಾಂತವಾಗಿದೆ. ವಿವಾದಾತ್ಮಕ ಸ್ಟೇಟಸ್ ಹಾಕಿದ ಯುವಕನ ಕಡೆಯ ನಾಲ್ವರು ಹಾಗೂ ಹಲ್ಲೆ ಮಾಡಿದ ಆರು ಜನರನ್ನು ಬಂಧಿಸಲಾಗಿದೆ.
ಪ್ರಕರಣ: ಇದೇ ತಿಂಗಳ 9ರ ತಡ ರಾತ್ರಿ ಚನ್ನಗಿರಿ ತಾಲೂಕಿನ ನಲ್ಲೂರಿನಲ್ಲಿ, ಒಂದು ಕೋಮಿನ ಬಗ್ಗೆ ಮತ್ತೊಂದು ಕೋಮಿನ ಯುವಕ ಅವಹೇಳನಕಾರಿ ಸ್ಟೇಟಸ್ ಹಾಕಿದ ಕಾರಣ ಘರ್ಷಣೆ ನಡೆದಿತ್ತು. ಒಂದು ಕೋಮಿನ ಯುವಕರ ಗುಂಪು ಮತ್ತೊಂದು ಕೋಮಿನ ಯುವಕನ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದರು. ಈ ಗಲಾಟೆಯಲ್ಲಿ ಓರ್ವ ಯುವಕನಿಗೆ ಚಾಕು ಇರಿತವಾಗಿತ್ತು.
ಇದನ್ನೂ ಓದಿ: ಎರಡು ಗುಂಪಿನ ನಡುವೆ ಮಾರಾಮಾರಿ: ಮೂವರಿಗೆ ಗಾಯ, ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಗಾಯಾಳುಗಳನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಇದೀಗ ಎರಡು ಕೋಮಿನ ಒಟ್ಟು ಹತ್ತು ಜನರನ್ನು ಪೊಲೀಸರು ಬಂಧಿಸಿದ್ದು, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.