ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ಜಟ್ಪಟ್ ನಗರದಲ್ಲಿ ಕಳೆದೊಂದು ತಿಂಗಳಿನಿಂದ ಕರೆಂಟ್ ಇಲ್ಲದೇ ಜನರು ಹೈರಾಣಾಗಿದ್ದಾರೆ. ವಿದ್ಯಾರ್ಥಿಗಳು ಪರದಾಡುವಂತಾಗಿದೆ. ವಿದ್ಯುತ್ ನೀಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಅಂಗಲಾಚಿ ಬೇಡಿಕೊಂಡರೂ ಅಧಿಕಾರಿಗಳು ಮಾತ್ರ ಕರಗಲಿಲ್ಲ ಎಂಬುದು ಜಟ್ಪಟ್ ನಿವಾಸಿಗಳ ಅಳಲಾಗಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ಜಟ್ಪಟ್ ನಗರದಲ್ಲಿ ವಿದ್ಯುತ್ ಕಡಿತಗೊಂಡಿದೆ. ಜನರು ನರಕಯಾತನೆ ಅನುಭವಿಸಿದರೆ, ವಿದ್ಯಾರ್ಥಿಗಳು ದೀಪದ ಬೆಳಕಿನಲ್ಲಿ ಓದಿಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಜಟ್ಪಟ್ ನಗರದಲ್ಲಿರುವ 80 ಕುಟುಂಬಗಳು ಕತ್ತಲಲ್ಲೇ ಜೀವನ ಕಳೆಯುವಂತಾಗಿದೆ.
ಕತ್ತಲಲ್ಲಿ 80 ಕುಟುಂಬಗಳು:
ಮನೆಯ ಹಕ್ಕು ಪತ್ರವಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು 80 ಕುಟುಂಬಗಳಿಗೆ ಸೇರಿದ ಮನೆಯ ವಿದ್ಯುತ್ ಕಡಿತ ಮಾಡಿದ್ದಾರೆ. ಮಕ್ಕಳ ಆನ್ಲೈನ್ ಕ್ಲಾಸಿಗೂ ಕರೆಂಟ್ ಇಲ್ಲದೇ, ಬೇರೆಡೆ ತೆರಳಿ 20 ರೂಪಾಯಿ ನೀಡಿ ಅಂಗಡಿಗಳಲ್ಲಿ ಮೊಬೈಲ್ ಚಾರ್ಜ್ ಮಾಡಿಸಿಕೊಳುವ ಮೂಲಕ ತರಗತಿಗಳಿಗೆ ಹಾಜರ್ ಆಗುತ್ತಿದ್ದಾರೆ. ನಿತ್ಯ ಎಣ್ಣೆ ದೀಪದ ಕೆಳಗೆ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಕಣ್ಣು ಉರಿ ಬರುವ ಪ್ರಸಂಗಗಳು ಕೂಡ ನಡೆಯುತ್ತಿವೆ.
ಇದನ್ನೂ ಓದಿ: ಪಡಿತರ ಚೀಟಿ ಹೊಂದಿದ ಎಲ್ಲ ಮನೆಗೂ ವಿದ್ಯುತ್ ಸಂಪರ್ಕ.. ಬಜೆಟ್ ಘೋಷಣೆ ಅನುಷ್ಠಾನಕ್ಕೆ ಆದ್ಯತೆ : ಇಂಧನ ಸಚಿವ
ಇನ್ನು 30 ವರ್ಷಗಳಿಂದ 80 ಕುಟುಂಬಗಳು ಇದೇ ಸ್ಥಳದಲ್ಲಿ ವಾಸವಾಗಿವೆ. ಇವರ ಬಳಿ ಮತದಾನದ ಗುರುತಿನ ಚೀಟಿ ಇದೆ. ಮನೆಯ ಹಕ್ಕು ಪತ್ರವಿಲ್ಲ. ಇಲ್ಲಿನ ಸ್ಥಳೀಯರು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವೊಬ್ಬ ಅಧಿಕಾರಿಗಳು, ಜನ ಪ್ರತಿನಿಧಿಗಳು ಇತ್ತ ಗಮನ ಹರಿಸಿಲ್ಲ ಎಂಬುದು ಇಲ್ಲಿನ ಜನರ ಅಸಮಾಧಾನವಾಗಿದೆ.
ನಿತ್ಯ ಕೂಲಿ ಮಾಡಿ ಜೀವನ ನಡೆಸುತ್ತಿರುವ ಕುಟುಂಬಗಳೀಗ ಸಂಕಷ್ಟದಲ್ಲಿದೆ. ಇಲ್ಲಿಂದ ಜನರನ್ನು ಒಕ್ಕಲೆಬ್ಬಿಸಲು ಅಧಿಕಾರಿಗಳು ಹಾಗೂ ಗ್ರಾಮದ ಕೆಲವರು ಕುತಂತ್ರ ನಡೆಸುತ್ತಿದ್ದಾರೆ ಎಂಬುದು ಹಲವರ ಆರೋಪವಾಗಿದೆ. ಒಟ್ಟಿನಲ್ಲಿ ಸಂಬಂಧಪಟ್ಟವರು ಈ ಕೂಡಲೇ ಇತ್ತ ಗಮನ ಹರಿಸಬೇಕಾಗಿದೆ.