ದಾವಣಗೆರೆ : ಜಿಲ್ಲೆಯ ಚನ್ನಗಿರಿ ತಾಲೂಕಿನ ಕಣಿವೆ ಬಿಳ್ಚಿ ಗ್ರಾಮದಿಂದ ಕೂಗಳತೆಯಲ್ಲಿರುವ ಕಣಿವೆ ಬಿಳ್ಚಿ ಕ್ಯಾಂಪ್ ಗ್ರಾಮ ಆಗಿ ಮೂರು ದಶಕಗಳೆ ಉರುಳಿವೆ. ಆದರೆ, ದುರಾದೃಷ್ಟ ಎಂದರೆ ಆ ಗ್ರಾಮದ ರಸ್ತೆಗಳು ಡಾಂಬರು ಕಂಡಿಲ್ಲ. ನೀರಿಗಾಗಿ ಹಾಹಾಕಾರವಿದೆ. ನಳಗಲ್ಲಿ ನೀರು ಬಾರದೆ ತಿಂಗಳುಗಳೇ ಕಳೆದಿವೆ.
.
ಇದಲ್ಲದೆ ಸ್ಥಳ ನೀಡಿದ್ದ ತಾಲೂಕು ಆಡಳಿತ ನಿವೇಶನಗಳಿಗೆ ಪಟ್ಟ ಪಾಣಿ ಕೊಡದೆ ಸತಾಯಿಸುತ್ತಿದೆ. ಇನ್ನು ಕಣಿವೆ ಬಿಳ್ಚಿ ಗ್ರಾಮದಿಂದ ಕಣಿವೆ ಬಿಳ್ಚಿ ಕ್ಯಾಂಪ್ಗೆ ಸಂಪರ್ಕ ಕಲ್ಪಿಸುವ ಸೇತುವೆ 1964ರಲ್ಲಿ ನಿರ್ಮಾಣವಾಗಿದೆ. ಅದು ಕೂಡ ನೆಲಕಚ್ಚಿದ್ದು, ಗ್ರಾಮದಲ್ಲಿ ವಾಸಿಸುವ ಕೂಲಿ ಕಾರ್ಮಿಕರಿಗೆ ದಿಕ್ಕು ತೋಚದಂತಾಗಿದೆ.
ಈ ಜಮೀನು ಅರಣ್ಯ ಇಲಾಖೆ ಅಥವಾ ಕಂದಾಯ ಇಲಾಖೆಗೆ ಸೇರಿದ್ದ ಎಂಬ ಗೊಂದಲದಲ್ಲಿ ಚನ್ನಗಿರಿ ತಾಲೂಕು ಆಡಳಿತವಿದೆ. ಅಲ್ಲಿನ ಜನ ಅರಣ್ಯ ವಾಸಿಗಳಂತೆ ಬದುಕುತ್ತಿದ್ದಾರೆ. ಮೂಲಸೌಕರ್ಯಗಳಿಲ್ಲದ ಜನ ರೋಸಿ ಹೋಗಿದ್ದಾರೆ.
ಈ ಕಣಿವೆ ಬಿಳ್ಚಿ ಗ್ರಾಮ ಆಗುವ ಮುನ್ನ ಈ ಖರಾಬು ಜಮೀನು ಅರಣ್ಯ ಇಲಾಖೆಗೆ ಸೇರಿದ್ದೆಂದು ಅರಣ್ಯ ಇಲಾಖೆ ವಾದ ಮಾಡ್ತಿದ್ರೇ, ಇತ್ತ ಕಂದಾಯ ಇಲಾಖೆ ಸ್ಥಳ ನಮಗೆ ಸೇರಿದ್ದು ಎಂದು ತಗಾದೆ ತೆಗೆಯುತ್ತಿದೆ. ಇದರಿಂದ ಸಾಕಷ್ಟು ಬಾರಿ ಕಣಿವೆ ಬಿಳ್ಚಿ ಕ್ಯಾಂಪ್ ಗ್ರಾಮಸ್ಥರು ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಕದ ತಟ್ಟಿದ್ರು ಕೂಡ ಯಾವುದೇ ಪ್ರಯೋಜನ ಆಗಿಲ್ಲ.
ಗುಡ್ಡದ ಮೇಲಿರುವ ಈ ಗ್ರಾಮಕ್ಕೆ ಸಂಪರ್ಕಿಸುವ ಭದ್ರಾ ಕಾಲುವೆಯ ಸೇತುವೆ ಕುಸಿದಿರುವುದರಿಂದ ಐದಾರು ಕಿ.ಮೀ ದೂರ ಕ್ರಮಿಸಿ ಊರು ಸೇರುವ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಗ್ರಾಮಸ್ಥರಿಗೆ ಆಧಾರ್, ಮತದಾನದ ಚೀಟಿ ಕೊಟ್ಟಿರುವ ರಾಜ್ಯ ಸರ್ಕಾರ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಎಡವಿದೆ.
ಅದೇನೆ ಆಗಲಿ ಊರು ನಿರ್ಮಾಣ ಆಗಿರುವ ಭೂಮಿ ಅರಣ್ಯ ಇಲಾಖೆಗೆ ಹಾಗೂ ಕಂದಾಯ ಇಲಾಖೆ ಸೇರಿದ್ದು ಎಂದು ಹಗ್ಗಜಗ್ಗಾಟದ ನಡುವೆ ಕಣಿವೆ ಬಿಳ್ಚಿ ಕ್ಯಾಂಪ್ನ ಗ್ರಾಮದ 120ಕ್ಕೂ ಹೆಚ್ಚು ಕುಟುಂಬಗಳು ಬಡವಾಗಿರುವುದಂತು ಸುಳ್ಳಲ್ಲ. ಸರ್ಕಾರ ಮಧ್ಯೆಪ್ರವೇಶಿಸಿ ಸಮಸ್ಯೆ ಬಗೆಹರಿಸಿ ಗ್ರಾಮಸ್ಥರಿಗೆ ಮೂಲಸೌಕರ್ಯಗಳನ್ನು ಒದಗಿಸುಬೇಕೆಂಬುದು ಈಟಿವಿ ಭಾರತ ಕಳಕಳಿಯಾಗಿದೆ.
ಇದನ್ನೂ ಓದಿ: ಕುಸಿದ ಸೇತುವೆ ಸಂಚರಿಸಲು ದಾರಿ ಇಲ್ಲದೇ ಹೈರಾಣಾದ 80ಕ್ಕೂ ಹೆಚ್ಚು ಕುಟುಂಬಗಳು....!