ದಾವಣಗೆರೆ: ಅವರು ಒಂದು ಕಾಲದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಬ್ರಿಟಿಷ್ ಅಧಿಕಾರಿಗಳ ಬೂಟುಕಾಲಿನಿಂದ ಒದೆ ತಿಂದು ತಿಂಗಳುಗಳ ಕಾಲ ಜೈಲಿನಲ್ಲಿ ಸೆರೆ ವಾಸ ಅನುಭವಿಸಿದವರು. ಅದರೆ ಇಂತಹ ಹೋರಾಟಗಾರರನ್ನು ಸರ್ಕಾರ ಬಹಳ ಕೇವಲವಾಗಿ ನಡೆಸಿಕೊಳ್ಳುತ್ತಿದೆ. ಕೇವಲ ತಿಂಗಳಿಗೆ ಒಂದು ಬಾರಿ ಮಾಸಾಶನ ನೀಡಿ, ಮೂಲಭೂತ ಸೌಲಭ್ಯಗಳನ್ನು ನೀಡದೆ ಬಾಡಿಗೆ ಮನೆಗಳಲ್ಲಿ ಜೀವನ ಸಾಗಿಸುವಂತೆ ಮಾಡಿದೆ.
ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ದಾವಣಗೆರೆ ಮಂದಿಯನ್ನು ಹುಡುಕಿ ಜಿಲ್ಲಾಡಳಿತ ಸ್ವಾತಂತ್ರ್ಯೋತ್ಸವ ಆಹ್ವಾನಿಸಿರುವ ಜೊತೆಗೆ ಸನ್ಮಾನ ಮಾಡುತ್ತಿದೆ. ಕೆಲ ದಿನಗಳ ಹಿಂದೆ ದಾವಣಗೆರೆ ಉಸ್ತುವಾರಿ ಸಚಿವ ಹಾಗು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಿ ಮನೆಗೆ ತೆರಳಿ ಸನ್ಮಾನ ಮಾಡಿದ್ದರು. ಅಂತಹವರಲ್ಲಿ ದಾವಣಗೆರೆಯ ಎಸ್ ಎಸ್ ಬಡಾವಣೆಯಲ್ಲಿ ವಾಸವಿರುವ ಟಿ ಎಸ್ ಸಿದ್ದರಾಮಪ್ಪನವರೂ ಒಬ್ಬರು.
ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗಿಯಾಗಿ ಬ್ರಿಟಿಷ್ ಅಧಿಕಾರಿಗಳ ದೌರ್ಜನ್ಯಕ್ಕೊಳಗಾದವರ ಸಾಲಿನಲ್ಲಿ ಇವರೂ ಒಬ್ಬರು. ದಾವಣಗೆರೆಯಿಂದ ಬೆಂಗಳೂರಿಗೆ ರೈಲಿನಲ್ಲಿ ಕರೆದೊಯ್ಯುತ್ತಿದ್ದ ಬ್ರಿಟಿಷ್ ಅಧಿಕಾರಿಗಳು ತಿಂಗಳುಗಟ್ಟಲೆ ಸೆಂಟ್ರಲ್ ಜೈಲಿನಲ್ಲಿ ಬಂಧಿಸಿಡುತ್ತಿದ್ದರಂತೆ. ಹೀಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಟಿ ಎಸ್ ಸಿದ್ದರಾಮಪ್ಪ ಇದೀಗ ಜೀವನ ನಡೆಸಲು ಒಂದು ಸ್ವಂತ ಸೂರು ಇಲ್ಲದೆ, ಎರಡು ಕಣ್ಣು ಕಾಣದ ಮಗ ವಿನಯ್ ಅವರೊಂದಿಗೆ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಇದೀಗ ಸರ್ಕಾರಕ್ಕೆ, ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಂತೆ ಇಲ್ಲವೇ ತನ್ನ ಎರಡು ಕಣ್ಣು ಇಲ್ಲದ ಮಗ ವಿನಯ್ಗೆ ಸರ್ಕಾರಿ ಕೆಲಸ ಇಲ್ಲವೆ ಮನೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಸರ್ಕಾರಗಳು ಕೇವಲ ಮಾಸಾಶನ ನೀಡಿ ಕೈ ತೊಳೆದುಕೊಳ್ಳುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಕಿಮ್ಮತ್ತಿಲ್ಲದಂತೆ ವರ್ತಿಸುತ್ತಿವೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಮಕ್ಕಳಿಗೆ ಇಲ್ಲವೇ ಅವರ ಧರ್ಮಪತ್ನಿಗೆ ಮೂಲಭೂತ ಸೌಕರ್ಯಗಳನ್ನು ನೀಡಬೇಕಾಗಿದೆ. ಜನಪ್ರತಿನಿಧಿಗಳು ಸ್ವಾತಂತ್ರ್ಯ ಹೋರಾಟಗಾರರ ಮನೆಗೆ ನಾಲ್ಕು ದಿನಗಳ ಮುಂಚೆ ಆಗಮಿಸಿ ಸನ್ಮಾನ ಮಾಡಿ ಹೋಗುವುದು ಬಿಟ್ಟರೆ, ಮತ್ತೇನೂ ಮಾಡಿಲ್ಲ. ಸನ್ಮಾನ ಮಾಡಲಿ ತೊಂದರೆ ಇಲ್ಲ. ಆದರೆ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಜೀನಾಂಶಕ್ಕೆ ಅನುಕೂಲ ಆಗುವಂತೆ ಮೂಲಭೂತ ಸೌಲಭ್ಯ ಕಲ್ಪಸಲಿ ಎಂದು ಸರ್ಕಾರಕ್ಕೆ ವಿನಯ್ ಮನವಿ ಮಾಡಿದರು.
ಇದನ್ನೂ ಓದಿ: ಅಂಚೆ ಕಚೇರಿಯಲ್ಲೂ ಸಿಗುತ್ತೆ ರಾಷ್ಟ್ರಧ್ವಜ: ಬೆಲೆ 25 ರೂಪಾಯಿ