ದಾವಣಗೆರೆ: ಅವರಿಬ್ಬರು ಸಹೋದರರು (ಚಿಕ್ಕಮ್ಮ, ದೊಡ್ಡಮ್ಮನ ಮಕ್ಕಳು). ಅಣ್ಣನ ಮದುವೆ ನಿಶ್ಚಯ ಆಗಿದ್ದರಿಂದ ಅಣ್ತಮ್ಮ ಇಬ್ಬರು ಮಂಗಳವಾರದಂದು ಬೆಣ್ಣೆ ನಗರಿಗೆ ಶಾಪಿಂಗ್ಗೆ ತೆರಳಿದ್ದಾರೆ. ಖರೀದಿಗೂ ಮೊದಲು ಪೋಷಕರಿಗೆ ಮಾಡಿದ್ದ ವಿಡಿಯೋ ಕಾಲ್ ಅವರ ಕೊನೆಯ ಕರೆ ಆಗಿತ್ತು. ಬೆಳಗಾಗುವುದರಲ್ಲಿ ಇಬ್ಬರು ಸಹೋದರರಲ್ಲಿ ಒಬ್ಬ ಶವವಾಗಿ ಸಿಕ್ಕಿದ್ರೆ, ಮತ್ತೊಬ್ಬ ನಾಪತ್ತೆಯಾಗಿದ್ದಾನೆ.
ಜಿಲ್ಲೆಯ ಹರಿಹರ ಪಟ್ಟಣದ ನಿವಾಸಿ ಮೆಹಬೂಬ್ ಬಾಷಾ ಅವರ ಮಗ ಅಲ್ತಾಫ್ ಶವವಾಗಿ ಸಿಕ್ಕಿದ್ದಾನೆ. ದಾವಣಗೆರೆ ಬಳಿಯ ಕುಂದವಾಡ ಕೆರೆಯ ಕೂಗಳತೆಯಲ್ಲಿರುವ ಮಹಾಲಕ್ಷ್ಮಿ ಲೇಔಟ್ ಬಳಿಯ ನಿರ್ಜನ ಪ್ರದೇಶದಲ್ಲಿ ಅಲ್ತಾಫ್ನ ಕುತ್ತಿಗೆ ಸೀಳಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಅದು ಹರಿಹರ ನಗರದ ಯುವಕ ಅಲ್ತಾಫ್ನ ಶವ ಎಂದು ತನಿಖೆ ನಡೆಸಿದ ಪೊಲೀಸರು ಗುರುತಿಸಿದ್ದರು.
ಈ ಬೆನ್ನೆಲ್ಲೇ ಹರಿಹರದ ಪೊಲೀಸ್ ಠಾಣೆಯಲ್ಲಿ ಕೊಲೆಯಾದ ಅಲ್ತಾಫ್ ಹಾಗೂ ಇಬ್ರಾಹಿಂ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು. ಕಾಣೆಯಾದ ಸಹೋದರರಲ್ಲಿ ಅಲ್ತಾಫ್ ಶವವಾಗಿ ಪತ್ತೆಯಾಗಿದ್ರೆ, ಇಬ್ರಾಹಿಂ ಕಾಣೆಯಾಗಿರುವುದು ಪೋಷಕರನ್ನು ಆತಂಕಕ್ಕೆ ದೂಡಿದೆ.
ಘಟನೆ: ಅಣ್ಣ ಇಬ್ರಾಹಿಂ ಅವರ ಮದುವೆ ಮಾರ್ಚ್ ತಿಂಗಳಲ್ಲಿ ನಿಶ್ಚಯವಾಗಿತ್ತು. ಈ ಹಿನ್ನೆಲೆ ಹೆಣ್ಣಿನ ಮನೆಗೆ ನಿಶ್ಚಿತಾರ್ಥದ ಶಾಸ್ತ್ರಕ್ಕೆಂದು ಇಬ್ರಾಹಿಂ ಹಾಗೂ ಅಲ್ತಾಫ್ ಜವಳಿ ಖರೀದಿಗೆಂದು ಮಂಗಳವಾರ ಸಂಜೆ ದಾವಣಗೆರೆ ಹೋಗಿದ್ರು. ರಾತ್ರಿ 8:30 ರವರೆಗೆ ಕುಟುಂಬಸ್ಥರೊಂದಿಗೆ ಫೋನ್ ಮೂಲಕ ಸಂಪರ್ಕದಲ್ಲಿದ್ದರು. ನಂತರ, ಇದ್ದಕ್ಕಿದ್ದಂತೆ ಒಂದು ಫೋನ್ ಸ್ವಿಚ್ ಆಫ್ ಆಗಿದೆ. ಮತ್ತೊಂದು ಪೋನ್ ಆನ್ ಇದ್ರೂ ಕಾಲ್ ರೀಸೀವ್ ಮಾಡುತ್ತಿರಲ್ಲ. ತಡರಾತ್ರಿ ಸಹೋದರರಿಬ್ಬರು ಮನೆಗೆ ವಾಪಸ್ ಬಾರದ ಹಿನ್ನೆಲೆ ಕುಟುಂಬದವರು ಹರಿಹರ ನಗರ ಪೊಲೀಸ್ ಠಾಣೆಗೆ ದೂರ ನೀಡಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ಫೈಟರ್ ಕೋಳಿ ಕದ್ದ ಖದೀಮರು, ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ಬುಧವಾರ ಸಂಜೆ ಹೊತ್ತಿಗೆ ಅಲ್ತಾಫ್ನ ಶವ ದಾವಣಗೆರೆ ಮಹಾಲಕ್ಷ್ಮೀ ಲೇಔಟ್ನ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ಇಬ್ರಾಹಿಂ ಹಾಗೂ ಆತನ ಬೈಕ್ ನಾಪತ್ತೆಯಾಗಿದ್ದು, ಪೊಲೀಸರು ತನಿಖೆ ಮುಂದುರೆಸಿದ್ದಾರೆ.
ಅಲ್ತಾಫ್ನ ಕುತ್ತಿಗೆ ಸೀಳಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಆತನ ಮೈ ಮೇಲಿರುವ ಗಾಯಗಳಿಂದ ಕೊಲೆ ಮುನ್ನ ಜಗಳವಾಗಿರುವ ಶಂಕೆ ಇದೆ. ಕೊಲೆ ಮಾಡಿದವರು ಯಾರು ಎಂಬುದು ಪೊಲೀಸ್ ತನಿಖೆ ಬಳಿಕೆ ತಿಳಿದುಬರಬೇಕಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ