ದಾವಣಗೆರೆ : ಸಿದ್ದರಾಮಯ್ಯ ಒಬ್ಬ ನಿಸ್ಸಹಾಯಕರು. ಬಲವಾಗಿದ್ದ ವ್ಯಕ್ತಿ ನಿಸ್ಸಹಾಯಕರಾಗಿದ್ದಕ್ಕೆ ಸಾಕಷ್ಟು ನೋವು ಇದೆ ಎಂದು ವಿಧಾನ ಪರಿಷತ್ ಸದಸ್ಯ ಸಿ ಎಂ ಇಬ್ರಾಹಿಂ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಕೆಲವರಿಗೆ ವಯಸ್ಸಾಗಿ ನಿಶ್ಯಕ್ತರಾಗುತ್ತಿದ್ದಾರೆ. ಕೆಲವರು ರಾಜಕೀಯವಾಗಿ ನಿಶ್ಯಕ್ತರಾಗುತ್ತಿದ್ದಾರೆ ಎಂದು ಪರೋಕ್ಷವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜಕೀಯವಾಗಿ ನಿಶ್ಯಕ್ತರಾಗುತ್ತಿದ್ದಾರೆ ಎಂದರು.
ನನ್ನನ್ನು ಕರೆದು ಹೈಕಮಾಂಡ್ ಮಾತನಾಡಲಿ. ಹೈಕಮಾಂಡ್ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ. ಇಂದು ಮಧ್ಯಾಹ್ನ ಹುಬ್ಬಳ್ಳಿಯಲ್ಲಿ ಸಭೆ ನಡೆಸುತ್ತೇವೆ. ಬೆಳಗಾವಿಯಲ್ಲಿ ಸಭೆ ಮಾಡಿ ನಂತರ ನನ್ನ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.
ನಮ್ಮ ಶಕ್ತಿಯೀಗ ನಮ್ಮ ಶತ್ರು ಆಗಿದೆ : ನನಗೆ ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಸೇರಿದಂತೆ ಹಲವರು ಕರೆ ಮಾಡಿದ್ದಾರೆ. ಮುಂದೆ ಸಮ್ಮಿಶ್ರ ಸರ್ಕಾರ ಬರುತ್ತೆ ಹೊರತು ಫುಲ್ ಮೆಜಾರಿಟಿ ಬರೋದಿಲ್ಲ. ನನ್ನನ್ನು ರಾಜಕೀಯ ಪ್ರಚಾರಕ್ಕಾಗಿ ಮಾತ್ರ ಬಳಸಿಕೊಂಡಿದ್ದಾರೆ.
ಕೌನ್ಸಿಲ್‌ನಲ್ಲಿ 21 ಜನರಲ್ಲಿ 19 ಜನ ನನ್ನ ಪರ ಇದ್ದರು. ಆದರೆ, ವಿರೋಧ ಪಕ್ಷ ಸ್ಥಾನ ನೀಡಿಲ್ಲ. ನಮ್ಮ ಶಕ್ತಿ ನಮ್ಮ ಶತ್ರು ಆಗಿದೆ. ಕಾಂಗ್ರೆಸ್ನಿಂದ ಬಹಳಷ್ಟು ಜನರು ಬರುವವರಿದ್ದಾರೆ. ಡ್ಯಾಂ ಒಡೆದಾಗ ಹೇಗೆ ನೀರು ಹೊರ ಬರುತ್ತೋ ಅದೇ ರೀತಿ ಕಾಂಗ್ರೆಸ್ನಲ್ಲಿದ್ದವರು ಬರ್ತಾರೆ ಎಂದರು.
ಆರೋಪ ಸಾಬೀತುಪಡಿಸಲಿ : ವಕ್ಫ್ ಆಸ್ತಿ ಕಬಳಿಸಿದ್ದಾರೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ನನ್ನ ವಿರುದ್ಧ ಮಾಡಿರುವ ಆರೋಪ ಸಾಬೀತುಪಡಿಸಲಿ. ರಾಜ್ಯ ಸರ್ಕಾರ ಈ ಹಿಂದೆ ಅನ್ವರ್ ಮಾನ್ಪಡೆ ಅವರ ನೇತೃತ್ವದಲ್ಲಿ ಸಿದ್ಧಪಡಿಸಿದ ವರದಿ ಸಿಬಿಐಗೆ ಕೊಡಲಿ.
ಉಗ್ರಪ್ಪನ ಮದುವೆ ಮಾಡಿದ್ದು ನಾನು. ಎಂಎಲ್ಸಿ ಮಾಡಿದ್ದು ನಾನು. ನಾನು ಕಾರ್ ಕೂಡ ಕೊಟ್ಟಿದ್ದೆ. ಇದನ್ನು ಮರೆತಿದ್ದಾರೆ. ಅವರು ವಕೀಲರು, ನಾನು ಅವರ ಕಕ್ಷೀದಾರ ಆಗಿದ್ದೆ. ಆದ್ರೆ, ವಕೀಲನಾದ ವ್ಯಕ್ತಿ ಕಕ್ಷಿದಾರನ ಪರ ಇರಬೇಕು. ಇದನ್ನು ಬಿಟ್ಟು ಕಕ್ಷಿದಾರನ ವಿರುದ್ಧವೇ ವಾದ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಸಿಎಂ ಬೊಮ್ಮಾಯಿ ಪಂಚರ್ ಆದ ಬಸ್ : ರಾಜ್ಯದಲ್ಲಿ ಬಿಜೆಪಿ ಕಥೆ ಮುಗಿದಿದೆ. ಸುಡಬೇಕೋ ಊಳಬೇಕೋ ಎನ್ನುವುದೇ ಸದ್ಯ ಇರುವ ಪ್ರಶ್ನೆ. ಬಸವಕೃಪಾ ( ಲಿಂಗಾಯತ) ಆದ್ರೆ ಊಳಬೇಕು. ಕೇಶವ ಕೃಪಾ (ಆರ್‌ಎಸ್ಎಸ್) ಆದ್ರೆ ಸುಡಬೇಕು ಎಂಬ ಸ್ಥಿತಿ ಇದೆ. ಸಿಎಂ ಬಸವರಾಜ ಬೊಮ್ಮಾಯಿ ಒಂದು ರೀತಿ ಪಂಚರ್ ಆದ ಬಸ್ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಪಂಚಮಸಾಲಿ ಪೀಠದ 3ನೇ ಪೀಠಕ್ಕೆ ನೂತನ ಪೀಠಾಧಿಪತಿ.. ಬಬಲೇಶ್ವರದ ಡಾ.ಮಹದೇವ ಶಿವಾಚಾರ್ಯ ಶ್ರೀಗೆ ಪಟ್ಟಾಭಿಷೇಕ..
ಯಾವಾಗ ಏನಾಗುತ್ತೋ ಗೊತ್ತಿಲ್ಲ. ಆದ್ರೆ, ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರಲಿದೆ. ಇವರಿಗೆ ರಾಮಮಂದಿರ ಆಯಿತು, ಗೋ ಹತ್ಯೆ ಆಯಿತು, ಈಗ ಹಿಜಾಬ್ ಹಿಡಿದಿದ್ದಾರೆ. ಹಿಜಾಬ್ ಅರ್ಥವೇ ಬಿಜೆಪಿಗೆ ಗೊತ್ತಿಲ್ಲ. ಸಮವಸ್ತ್ರ ಮಾಡಲಿ. ಮಕ್ಕಳು ವೇಲ್ ಹೆಗಲಮೇಲೆ ಹಾಕಿಕೊಳ್ಳುತ್ತಾರೆ. ಅದೇ ವೇಲ್ ತಲೆ ಮೇಲೆ ಹಾಕಿಕೊಂಡರೆ ಏನು ಕಷ್ಟ ಎಂದು ಸಿಎಂ ಇಬ್ರಾಹಿಂ ಪ್ರಶ್ನಿಸಿದರು.