ದಾವಣಗೆರೆ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಕಳೆದು ಕೊಂಡ ಮೇಲೆ ಹುಚ್ಚರಾಗಿದ್ದು, ದಿನಕೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಈಶ್ವರಪ್ಪ ಸಿಎಂ ಆಗಲು ಕುರುಬರ ಎಸ್ಟಿ ಹೋರಾಟ ಮಾಡುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದರು. ಒಬ್ಬ ಮುಖ್ಯಮಂತ್ರಿ ಆಗಿದ್ದವರು ಈ ರೀತಿ ನೀಚತನಕ್ಕೆ ಇಳಿಯಬಾರದು, ನಾನು ಮುಖ್ಯಮಂತ್ರಿ ಆಗುವುದನ್ನು ಬಿಜೆಪಿ ಪಕ್ಷ ನಿರ್ಧಾರ ಮಾಡುತ್ತದೆ ಎಂದರು.
ಪಾದಯಾತ್ರೆ ಮಾಡುತ್ತಿರುವುದು ಕನಕ ಗುರುಪೀಠದ ಸ್ವಾಮೀಜಿ, ನಾನು ಪಾದಯಾತ್ರೆ ಮಾಡುತ್ತಿಲ್ಲ. ಕನಿಷ್ಠ ಅರ್ಧ ಕಿಲೋಮೀಟರ್ ಆದರೂ ಸಿದ್ದರಾಮಯ್ಯ ಪಾದಯಾತ್ರೆ ಮಾಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಈಶ್ವರಪ್ಪ ಸವಾಲು ಹಾಕಿದರು.
ಓದಿ: ಎಸ್ಟಿ ಮೀಸಲಾತಿ ಹೋರಾಟ: 3ನೇ ದಿನಕ್ಕೆ ಕಾಲಿಟ್ಟ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಪಾದಯಾತ್ರೆ
ಸಿದ್ದರಾಮಯ್ಯ ಹೋಗದಿದ್ದರೆ ಪಾದಯಾತ್ರೆಗೆ ಯಾರೂ ಹೋಗಲ್ಲ ಎನ್ನುವ ಭ್ರಮೆಯಲ್ಲಿ ಇದ್ದು, ಆದರೆ ಈಗ ಸ್ವಾಮೀಜಿಗಳ ಜೊತೆ ಲಕ್ಷಾಂತರ ಜನ ಹೋಗುತ್ತಿರುವುದನ್ನು ನೋಡಿ ಅವರು ಸಹಿಸಿಕೊಳ್ಳುತ್ತಿಲ್ಲ. ಅಜ್ಜಿ ಕೋಳಿಯಿಂದಲೇ ಸೂರ್ಯ ಹುಟ್ಟೋದು ಅನ್ನೋ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದು, ಈಗ ಸ್ವಾಮೀಜಿಗಳನ್ನು ಬಯ್ಯೋಕೆ ಆಗೋಲ್ಲ ಅಂತ ನನ್ನ ಮೇಲೆ ಹೇಳಿಕೆ ಕೊಡುತ್ತಿದ್ದಾರೆ ಎಂದರು.
ಕಿಸಾನ್ ಕಾಂಗ್ರೆಸ್ ಪ್ರತಿಭಟನೆಗೆ ವ್ಯಂಗ್ಯ:
ನಾಳೆ ಬೆಂಗಳೂರಿನಲ್ಲಿ ಕಿಸಾನ್ ಕಾಂಗ್ರೆಸ್ ನಿಂದ ರಾಜ್ ಭವನ್ ಚಲೋ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಸಚಿವ ಕೆಎಸ್ ಈಶ್ವರಪ್ಪ ಒಬ್ಬ ಪೆನ್ನು ತಯಾರಕ ಅದರ ಬೆಲೆ ನಿಗದಿ ಮಾಡ್ತಾರೆ. ಆದರೆ ರೈತ ತಾನು ಬೆಳೆದ ಬೆಳೆಗೆ ಬೆಲೆ ನಿಗದಿ ಮಾಡಬಾರದಾ?, ಇದನ್ನು ಕಾಂಗ್ರೆಸ್ನವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಇಡೀ ದೇಶದಲ್ಲಿ ರೈತರು ಯಾರು ಕೂಡ ಪ್ರತಿಭಟನೆ ಮಾಡುತ್ತಿಲ್ಲ. ಕಾಂಗ್ರೆಸ್ ನವರೇ ರೈತರ ಹೆಸರಿನಲ್ಲಿ ಪ್ರತಿಭಟನೆ ಮಾಡುತ್ತಿದ್ದು, ಎಲ್ಲಾ ರೈತರು ಈ ಕಾಯ್ದೆಗಳಿಂದ ಸಂತೋಷವಾಗಿದ್ದಾರೆ ಎಂದರು.