ದಾವಣಗೆರೆ : ಸ್ವಾಮೀಜಿಗಳು ಧಾರ್ಮಿಕ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಸಿಎಂ ಆಗಿದ್ದ ಸಿದ್ದರಾಮಯ್ಯನವರು ಅರಿತು ಹೇಳಿಕೆ ಕೊಡಬೇಕಿತ್ತು. ಸ್ವಾಮೀಜಿಗಳ ಮನಸ್ಸಿಗೆ ನೋವು ಉಂಟು ಮಾಡುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡಿದ್ದಾರೆಂದು ಸಚಿವ ಭೈರತಿ ಬಸವರಾಜ್ ಬೇಸರ ವ್ಯಕ್ತಪಡಿಸಿದರು. ದಾವಣಗೆರೆಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಎಲ್ಲಾ ಸ್ವಾಮೀಜಿಗಳು ಕೂಡ ಬೇಸರ ವ್ಯಕ್ತಪಡಿಸಿದ್ದಾರೆ. ಇಂತಹ ಹೇಳಿಕೆ ಕೊಡುವುದು ಸರಿಯಲ್ಲ. ಯಾರೇ ಆಗಲಿ ಶಾಂತಿ ಕದಡುವ ಕೆಲಸ ಮಾಡಬಾರದು ಎಂದರು.
ಹಿಂದೂ ಧಾರ್ಮಿಕ ಕ್ಷೇತ್ರದಲ್ಲಿ ಅನ್ಯ ಧರ್ಮೀಯರಿಂದ ವ್ಯಾಪಾರ ನಿಷೇಧಕ್ಕೆ ಕಾಯ್ದೆ ಮಾಡಿದ್ದು ನಾವಲ್ಲ. ಕಾಂಗ್ರೆಸ್ ಅವಧಿಯಲ್ಲೇ ಈ ಕಾಯ್ದೆ ಮಾಡಲಾಗಿದೆ. ಅಂಗೀಕಾರ ಪಡೆದು ಕಾನೂನು ತಿದ್ದುಪಡಿ ಮಾಡಿದ್ದಾರೆ. ಅದನ್ನು ಪಾಲನೆ ಮಾಡುವ ಕೆಲಸ ನಾವು ಮಾಡುತ್ತಿದ್ದೇವೆ ಅಷ್ಟೇ.. ಚುನಾವಣೆಗೆ ಒಂದು ವರ್ಷ ಬಾಕಿಯಿದೆ. ಚುನಾವಣೆ ಯಾವಾಗ ಬಂದರೂ ಎದುರಿಸಲು ನಾವು ರೆಡಿ ಇದ್ದೇವೆ. ಚುನಾವಣೆಗೂ ಇದಕ್ಕೂ ಸಂಬಂಧ ಇಲ್ಲ. ಡಿಸೆಂಬರ್ಗೆ ಚುನಾವಣೆ ಪ್ರಸ್ತಾವನೆ ಇಲ್ಲ. ಅವಧಿ ಮುಗಿದ ಬಳಿಕವೇ ಚುನಾವಣೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಚಿತ್ರಕಲಾ ವಿಶ್ವವಿದ್ಯಾಲಯ ಸ್ಥಾಪನೆ : ಬೊಮ್ಮಾಯಿ ಭರವಸೆ
ಸಂಪುಟ ವಿಸ್ತರಣೆ ಸಿಎಂಗೆ ಬಿಟ್ಟ ವಿಚಾರ. ಮುಂದಿನ ತಿಂಗಳು ಪ್ರಧಾನಿ, ಗೃಹ ಸಚಿವರು ಬೆಂಗಳೂರಿಗೆ ಬರುತ್ತಿದ್ದು, ಆಗ ಸಂಪುಟ ವಿಸ್ತರಣೆ ಚರ್ಚೆ ಆಗಬಹುದು ಎಂದರು. ಇನ್ನೂ ಸಿಎಂ ಬಸವರಾಜ ಬೊಮ್ಮಾಯಿಯವರು 24 ಗಂಟೆ ಕೆಲಸ ಮಾಡುತ್ತಿದ್ದಾರೆ. ರಾಜಕಾರಣಕ್ಕೋಸ್ಕರ ವಿವಾದ ಮಾಡುವುದು ಸರಿಯಲ್ಲ. ಸಚಿವರ ಕೈಗೆ ಸಿಎಂ ಸಿಗುತ್ತಿಲ್ಲ ಎನ್ನುವುದು ಸುಳ್ಳು. ಎಲ್ಲಾ ಕಾರ್ಯಕ್ರಮ ಮುಗಿಸಿ, ಬಳಿಕ ಸದನಕ್ಕೆ ಬಂದು ಸಿಎಂ ಉತ್ತರ ಕೊಡುತ್ತಿದ್ದಾರೆ. ಸಿಎಂ ಸತತವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ಪರ ಬ್ಯಾಟ್ ಬೀಸಿದರು.