ದಾವಣಗೆರೆ: ಬೆಣ್ಣೆ ನಗರಿ ಖ್ಯಾತಿಯ ದಾವಣಗೆರೆ ಸ್ಮಾರ್ಟ್ ಸಿಟಿಯಾಗಿ ಆಯ್ಕೆಯಾಗಿದ್ದರೂ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿವೆ. ಇತ್ತ ಒಳಚರಂಡಿಗಳ ಸರಿಯಾದ ನಿರ್ವಹಣೆ ಇಲ್ಲದೆ ಅಪಾಯಕಾರಿ ಸ್ಥಳವಾಗಿ ನಿರ್ಮಾಣವಾಗಿದ್ದು, ಹಲವೆಡೆ ಯುಜಿಡಿ ಬಾಕ್ಸ್ಗಳು ಬೀಳುವ ಹಂತದಲ್ಲಿವೆ.
ಹೌದು, ದಾವಣಗೆರೆ ನಗರ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಗೊಂಡಿದೆ. ಆಯ್ಕೆಗೊಂಡ ಬಳಿಕವೂ ಯೋಜನೆಗೆ ಸಂಬಂಧಿಸಿದ ಕೆಲಸ ಮಾತ್ರ ಆಮೆಗತಿಯಲ್ಲಿ ನಡೆಯುತ್ತಿದೆ. ಇನ್ನು ಇತ್ತ ಹಲವೆಡೆ ಯುಜಿಡಿ ಬಾಕ್ಸ್ಗಳು ಬೀಳುವ ಹಂತದಲ್ಲಿದ್ದು, ಹಲವರು ಈ ಗುಂಡಿಗಳ ಒಳಗೆ ಬಿದ್ದು ಗಾಯಗೊಂಡಿದ್ದಾರೆ. ಮಕ್ಕಳು ಈ ಗುಂಡಿ ಒಳಗೆ ಬಿದ್ದರೆ ಸಾವೇ ಗತಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಗರದ ಹಳೇ ಕುಂದುವಾಡದಲ್ಲಿ ಯುಜಿಡಿ ಬಾಕ್ಸ್ ಬಿದ್ದು ಸುಮಾರು ತಿಂಗಳುಗಳೇ ಕಳೆದಿದೆ. ಇಲ್ಲಿ ಪ್ರತಿನಿತ್ಯ ಮಕ್ಕಳು ಸೇರಿ ಜನರು ಓಡಾಡುತ್ತಾರೆ. ಕೆಲ ದಿನಗಳ ಹಿಂದೆ ಇಬ್ಬರು ಈ ಯುಜಿಡಿಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಇನ್ನು ಸಣ್ಣ ಮಕ್ಕಳು ಶಾಲೆಗೆ ಹೋಗುವಾಗ ಎಲ್ಲಿ ಈ ಯುಜಿಡಿಯಲ್ಲಿ ಬೀಳುತ್ತಾರೋ ಎಂಬ ಆತಂಕದಲ್ಲಿ ಪೋಷಕರಿದ್ದಾರೆ.
ಪಾಲಿಕೆ ನಿರ್ಲಕ್ಷ್ಯ...
ಈ ಬಗ್ಗೆ ಮಹಾನಗರ ಪಾಲಿಕೆಗೆ ಹಲವು ಬಾರಿ ಮಾಹಿತಿ ನೀಡಿದ್ದರೂ ಸರಿಪಡಿಸದೇ ನಿರ್ಲಕ್ಷ್ಯ ವಹಿಸಿದೆ ಎಂದು ಸಾರ್ವಜನಿಕರು ದೂರುತ್ತಾರೆ. ನಗರದ ಹಲವೆಡೆ ಯುಜಿಡಿ ಬಾಕ್ಸ್ಗಳು ಅರ್ಧ ಬಿದ್ದು ಹೋಗಿವೆ. ಹೀಗಿದ್ದರೂ ಪಾಲಿಕೆ ಮಾತ್ರ ಕಣ್ಮುಚ್ಚಿ ಕುಳಿತಿದ್ದು, ಸಾರ್ವಜನಿಕರು ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ. ನಗರಲ್ಲಿ ಜಲಸಿರಿ ಯೋಜನೆಯಡಿ ಪೈಪ್ಲೈನ್ ಕಾಮಗಾರಿ ನಡೆಸಲಾಗುತ್ತಿದೆ. ಈ ವೇಳೆ ಪೈಪ್ ಹಾಕಿದ ಬಳಿಕ ಸರಿಯಾಗಿ ಗುಂಡಿ ಮುಚ್ಚದೆ, ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಹಲವೆಡೆ ಗುಂಡಿಗಳನ್ನು ಹಾಗೇ ಬಿಟ್ಟು ಕಾಮಗಾರಿ ಮುಗಿಸಲಾಗಿದೆ ಎನ್ನಲಾಗಿದೆ.