ದಾವಣಗೆರೆ: ಬೆಣ್ಣೆ ನಗರಿಯ ಮಹಿಳೆಯರು ಹಾಗೂ ಮಕ್ಕಳ ರಕ್ಷಣೆಗೆ ನಿರ್ಭಯ ಪಡೆ ಸಜ್ಜಾಗಿದೆ. ಸರಗಳ್ಳತನ ಸೇರಿದಂತೆ ಇತರೆ ಪ್ರಕರಣಗಳನ್ನು ತಗ್ಗಿಸಲು ಹಾಗೂ ಸಾರ್ವಜನಿಕರ ಸುರಕ್ಷತೆಗಾಗಿ ದಾವಣಗೆರೆಯ ವಿಶೇಷ ನಿರ್ಭಯ ಪೊಲೀಸ್ ದ್ವಿಚಕ್ರ ವಾಹನಗಳು ಇಡೀ ಸ್ಮಾರ್ಟ್ ಸಿಟಿಯಾದ್ಯಂತ ಗಸ್ತು ತಿರುಗಲಿವೆ.
![Innovative nirbhaya project by Davangere police](https://etvbharatimages.akamaized.net/etvbharat/prod-images/kn-dvg-08-11-nirbhaya-police-pkg-7204336_11122020231044_1112f_1607708444_1038.png)
ದಾವಣಗೆರೆ ಸ್ಮಾರ್ಟ್ ಸಿಟಿಯಾದ ಬೆನ್ನಲ್ಲೇ ಅಪರಾಧ ಪ್ರಕರಣಗಳನ್ನು ತಗ್ಗಿಸಲು ಪೊಲೀಸ್ ಇಲಾಖೆ ನಿರ್ಭಯ ಪಡೆಯೊಂದನ್ನು ರಚಿಸಿದೆ. ಈ ನಿರ್ಭಯ ಪಡೆಯಲ್ಲಿ 21 ನಿರ್ಭಯ ಗಸ್ತು ದ್ವಿಚಕ್ರ ವಾಹನಗಳಿದ್ದು, ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ನಿಂತಿವೆ. ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ನಿರ್ಭಯ ಯೋಜನೆ ಅಡಿಯಲ್ಲಿ ಜಿಲ್ಲೆಗೆ 21 ಹೊಸ ಬೈಕ್‍ಗಳನ್ನು ನೀಡಲಾಗಿದೆ.
ಓದಿ: ನಿಯಮ ಉಲ್ಲಂಘನೆ ಕಣ್ಣಿಗೆ ಕಂಡರೆ ಮಾತ್ರ ವಾಹನ ತಡೆಯಬೇಕು: ಸಂಚಾರ ಪೊಲೀಸರಿಗೆ ಕಮಲ್ ಪಂತ್ ಆದೇಶ
ಠಾಣೆಗಳ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಿ ಈ ನಿರ್ಭಯ ಪಡೆ ರಚಿಸಲಾಗಿದ್ದು, ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯದ ಘಟನಾ ಸ್ಥಳಕ್ಕೆ ಹೋಗಲು, ತನಿಖೆ ನಡೆಸಲು ಈ ಬೈಕ್‍ಗಳನ್ನು ಬಳಸುವಂತೆ ಸೂಚನೆ ನೀಡಲಾಗಿದೆ. ಇದಲ್ಲದೆ ಸ್ಮಾರ್ಟ್ ಸಿಟಿ ಯೋಜನೆಯಡಿ ಜಿಲ್ಲೆಗೆ ಮೂರು ವಿಶೇಷ ಕಮಾಂಡೋ ವಾಹನಗಳು ಬಂದಿದ್ದು, ಇದಕ್ಕೆ ವಿವಿಧ ಉಪಕರಣಗಳನ್ನು ಅಳವಡಿಸಲಾಗಿದೆ. ಇವುಗಳನ್ನು ಉತ್ತರ ಮತ್ತು ದಕ್ಷಿಣ ವಲಯಗಳಿಗೆ ಹಾಗೂ ಜಿಲ್ಲಾ ಸಶಸ್ತ್ರ ಮೀಸಲು ಪಡೆಗೆ ಒಂದೊಂದು ವಾಹನ ಹಂಚಿಕೆ ಮಾಡಲಾಗಿದೆಯಂತೆ.
ಇನ್ನು ಜಿಲ್ಲೆಯಲ್ಲಿರುವ 13 ಗಸ್ತು ವಾಹನಗಳೊಂದಿಗೆ ಮೂರು ವಿಶೇಷ ಕಮಾಂಡೋ ವಾಹನಗಳು, ನಿರ್ಭಯ ಗಸ್ತು ಬೈಕ್‍ಗಳು ಹಾಗೂ ಚಿತಾ ಬೈಕ್‍ಗಳು ಬೆಣ್ಣೆ ನಗರಿಯನ್ನು ಗಸ್ತು ನಡೆಸಲಿವೆ. ಈ ವಾಹನಗಳ ಮೂಲಕ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲಿದ್ದು, ಮಕ್ಕಳ ಹಾಗೂ ಮಹಿಳೆಯರ ರಕ್ಷಣೆಗೆ ನಿಂತಿವೆ.
ಒಟ್ಟಾರೆ ಪ್ರಸ್ತುತ ದಿನಗಳಲ್ಲಿ ರಾತ್ರಿ ವೇಳೆ ಸಂಚರಿಸಲು ಮಹಿಳೆಯರು ಹಿಂದೇಟು ಹಾಕುತ್ತಿದ್ದರು. ಇದೀಗ ಮಹಿಳೆಯರ ರಕ್ಷಣೆಗೆ ನಿಂತಿರುವ ನಿರ್ಭಯ ವಾಹನಗಳು ರಸ್ತೆಗಿಳಿದಿದ್ದು, ನಿರ್ಭಯವಾಗಿ ಮಹಿಳೆಯರು ರಾತ್ರಿ ವೇಳೆ ಸಂಚರಿಸಬಹುದಾಗಿದೆ.