ದಾವಣಗೆರೆ: ಅದು ನೀರು, ಅದಿರು ಸೇರಿದಂತೆ ನೈಸರ್ಗಿಕ ಸಂಪತ್ತಿನಿಂದ ಕೂಡಿದ ಸಂಪದ್ಭರಿತ ಪ್ರದೇಶ. ಆದರೆ, ಇದೀಗ ಅ ಪ್ರದೇಶದಲ್ಲಿ ಜೆಸಿಬಿಗಳು ಘರ್ಜಿಸುತ್ತಿವೆ. ಮ್ಯಾಂಗನೀಸ್ ಅದಿರು ಹೆಚ್ಚಳವಾಗಿದ್ದರಿಂದ ಕೆಲವರು ಜಿಲ್ಲಾಡಳಿತದ ಒಪ್ಪಿಗೆ ಇಲ್ಲದೇ ಅಕ್ರಮ ಗಣಿಗಾರಿಕೆ ಶುರುಮಾಡಿದ್ದು, ಸ್ಥಳೀಯರು ಅಕ್ರಮಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ.
ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಜಮ್ಮಪುರ ಗ್ರಾಮದ ಬಳಿಯಿರುವ ಶ್ರೀ ಸೋಮೇಶ್ವರ ಬೆಟ್ಟದಲ್ಲಿ ರಾತ್ರೋರಾತ್ರಿ ಅಕ್ರಮ ಗಣಿಗಾರಿಕೆ ಶುರುವಾಗಿದೆ. ಈ ಗಣಿಗಾರಿಕೆ ಸುತ್ತಮುತ್ತಲಿನ ಗ್ರಾಮಸ್ಥರ ನಿದ್ದೆಗೆಡೆಸಿದೆ. ಅರಣ್ಯ ಪ್ರದೇಶವಾಗಿರುವ ಸೋಮೇಶ್ವರ ಬೆಟ್ಟದಲ್ಲಿ ಮ್ಯಾಂಗನೀಸ್ ಅದಿರಿನ ನಿಕ್ಷೇಪಗಳು ಇವೆ. ಈ ಕುರಿತು ಮಾಹಿತಿ ತಿಳಿದ ಕೆಲವರು ಅಕ್ರಮವಾಗಿ ರಾತ್ರೋರಾತ್ರಿ ಜಿಲ್ಲಾಡಳಿತದ ಅನುಮತಿಯಲ್ಲಿದೆ ಗಣಿಗಾರಿಕೆ ಶುರುಮಾಡಿದ್ದು, ನೂರಾರು ಟ್ರ್ಯಾಕ್ಟರ್ ಲೋಡ್ ಅದಿರು ಕದ್ದೊಯ್ದಿದ್ದಾರೆ.
ಈ ಕುರಿತು ಸ್ಥಳೀಯರು ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ತಾಲೂಕು ಆಡಳಿತದ ಗಮನಕ್ಕೆ ತಂದಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅದಿರನ್ನು ವಶಕ್ಕೆ ಪಡೆದಿದ್ದಾರೆ. ಇದಲ್ಲದೇ, ಜಗಳೂರು ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ತನಿಖೆ ಮುಂದುವರೆದಿದೆ.
ಜಮ್ಮಪುರದ ಸೋಮೇಶ್ವರ ಬೆಟ್ಡದ ಪಕ್ಕದಲ್ಲಿರುವ ಕೆರೆ ಸಾವಿರಾರು ಎಕರೆ ಕೃಷಿ ಪ್ರದೇಶಗಳಿಗೆ ಆಧಾರವಾಗಿದೆ. ಅಲ್ಲದೇ, ಜಗಳೂರು ಪಟ್ಟಣಕ್ಕೆ ನೀರು ಒದಗಿಸುತ್ತಿದ್ದು, ಈ ಪ್ರದೇಶವನ್ನು ಮಲೆನಾಡು ಎಂದು ಕರೆಯುತ್ತಿದ್ದರು. ಇದೀಗ ಗಣಿಗಾರಿಕೆ ಎನ್ನುವ ಭೂತ ಹೊಕ್ಕಿದ್ದು, ಅದಿರು ಸಾಗಣೆ ಮಾಡಿದವರ ವಿರುದ್ಧ ಎಫ್ಐಆರ್ ದಾಖಲಾಗಿಲ್ಲ. ಕೂಡಲೇ ಗಣಿಗಾರಿಕೆ ಮಾಡಲು ಮುಂದಾಗಿರುವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ರಸ್ತೆ ಮಧ್ಯೆ ಹೊತ್ತಿ ಉರಿದ ಸ್ಕೂಟರ್: ಒಬ್ಬನ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ